ರಮಝಾನ್ ಮುಗಿಯುವವರೆಗೆ ಬಟ್ಟೆಯಂಗಡಿಗಳು ಬಂದ್: ವ್ಯಾಪಾರಿಗಳ ಸಂಘಟನೆ ಕೆಟಿಎ ಯೂತ್ ಫೋರಂ ನಿರ್ಧಾರ
ಮಂಗಳೂರು, ಮೇ 4: ಲಾಕ್ಡೌನ್ ಸಡಿಲಿಕೆಯಾದರೂ ಬಟ್ಟೆಬರೆಯ ಅಂಗಡಿಗಳನ್ನು ತೆರೆಯದಿರುವಂತೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಂಪನಕಟ್ಟೆ ಪ್ರದೇಶದ ಎಲ್ಲ ಬಟ್ಟೆಬರೆ ಅಂಗಡಿಗಳನ್ನು ರಮಝಾನ್ ಮುಗಿಯುವವರೆಗೆ ಮುಚ್ಚಲು ನಿರ್ಧರಿಸಿರುವುದಾಗಿ ಕುನಿಲ್ ಸೆಂಟರ್, ಟೋಕಿಯೋ ಮಾರ್ಕೆಟ್ ಮತ್ತು ಅಕ್ಬರ್ ಕಾಂಪ್ಲೆಕ್ಸ್‌ನ ಅಂಗಡಿ ಮುಂಗಟ್ಟು, ವ್ಯಾಪಾರಿಗಳ ಸಂಘಟನೆ ಕೆಟಿಎ ಯೂತ್ ಫೋರಂ ಅಧ್ಯಕ್ಷ ಮುಹಶಿರ್ ಅಹಮದ್ ಸಾಮನಿಗೆ ತಿಳಿಸಿದ್ದಾರೆ.
ಈದ್ ಹಿನ್ನೆಲೆಯಲ್ಲಿ ಬಟ್ಟೆಬರೆ ಅಂಗಡಿಗಳನ್ನು ತೆರೆಯುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಡುತ್ತಿದೆ. ಇದು ಗೊಂದಲಕ್ಕೆ ಕಾರಣವಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹಂಪನಕಟ್ಟೆ ಪರಿಸರದ ಅಂಗಡಿಗಳ ಮಾಲಕರು ಸೇರಿ ಸಭೆ ನಡೆಸಿದ್ದೇವೆ. ಬಟ್ಟೆಬರೆ ಅಂಗಡಿಗಳನ್ನು ತೆರೆಯುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆಯಿರುವುದರಿಂದ ರಮಝಾನ್ ಮುಗಿಯುವವರೆಗೆ ಅಂಗಡಿಗಳು ತೆರೆಯದಿರಲು ನಿರ್ಧರಿಸಲಾಗಿದೆ. ಇದಕ್ಕೆ ಎಲ್ಲರು ಒಮ್ಮತದಿಂದ ಸಮ್ಮತಿಸಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರನ್ನು ಸಂಪರ್ಕಿಸಿ ಮಾತುಕತೆ ನಡೆಸಲಾಗಿದೆ. ಹಾಗೂ ಬಟ್ಟೆಯಂಗಡಿಗಳನ್ನು ಮುಚ್ಚುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದೆವೆ ಎಂದವರು ತಿಳಿಸಿದರು.