×
Ad

ನಗರದಲ್ಲಿ ಬಾಹ್ಯ ಗದ್ದಲ, ಸಂಭ್ರಮವಿಲ್ಲದ ಸರಳ, ಭಕ್ತಿ ಕೇಂದ್ರಿತ ‘ರಮಝಾನ್’

Update: 2020-05-04 16:02 IST

ಬೆಂಗಳೂರು, ಮೇ 3: ಮುಸ್ಲಿಮರ ಪವಿತ್ರ ರಮಝಾನ್ ಕಳೆದ ಶನಿವಾರದಿಂದ ಆರಂಭವಾಗಿದೆ. ಆದರೆ, ಕೊರೋನ ಲಾಕ್‌ಡೌನ್ ಹಿನ್ನೆಲೆ ಜನರ ಮುಕ್ತ ಓಡಾಟಕ್ಕೆ ನಿರ್ಬಂಧ ಇರುವುದರಿಂದ ಮುಸ್ಲಿಮರು ವಾಸಿಸುವ ಗಲ್ಲಿ, ಮೊಹಲ್ಲಾಗಳಲ್ಲಿ ಬಣ್ಣದ ದಿರಿಸು ತೊಟ್ಟು ಸಂಭ್ರಮಿಸುತ್ತಿದ್ದವರ ಉತ್ಸಾಹ ಮತ್ತು ಸಂಭ್ರಮದ ಲವಲವಿಕೆ ಈಗ ಕಂಡು ಬರುತ್ತಿಲ್ಲ. ಕೊರೋನ ಲಾಕ್‌ಡೌನ್ ಹಿನ್ನೆಲೆ ಈ ಬಾರಿ ಮಸೀದಿಗಳಲ್ಲಿ ಪ್ರಾರ್ಥನೆಯ ಸುಳಿವಿಲ್ಲ. ಜನ ದಟ್ಟಣೆಯ ಗೌಜು-ಗದ್ದಲವಿಲ್ಲ. ಸಮೋಸ, ಕಚೋರಿ, ಫಲೂದದ ವಿನಿಮಯವೂ ನಡೆಯತ್ತಿಲ್ಲ. ಸರಕಾರ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಿರುವುದರಿಂದ ಮುಸ್ಲಿಮರು ತಮ್ಮ ತಮ್ಮ ಮನೆಗಳಲ್ಲೇ ಅಂತರ ಕಾಯ್ದುಕೊಂಡು ಪ್ರಾರ್ಥನೆ ಮಾಡುವುದರ ಜತೆಗೆ ಉಪವಾಸವನ್ನು ಆಚರಿಸುತ್ತಿದ್ದಾರೆ. ಫ್ರೇಜರ್ ಟೌನ್‌ನಲ್ಲಿರುವ ಹಾಜಿ ಇಸ್ಮಾಯಿಲ್ ಶೇಠ್ ಮಸೀದಿ, ಖಾದ್ರಿಯಾ ಮಸೀದಿ,ಬಿಲಾಲ್ ಮಸೀದಿ, ಕೋರಮಂಗಲದ ಮಸೀದಾ ಮಾಮೂರು ಮಸೀದಿ ಸೇರಿದಂತೆ ನಗರದ ಎಲ್ಲ ಮಸೀದಿಗಳಲ್ಲಿ ನಸುಕಿನ ಫಜರ್ ನಮಾಝ್ ಆರಂಭ ಆಗುತ್ತಿತ್ತು. ಬಹುತೇಕರು ಎಲ್ಲಿದ್ದರೂ ಮಸೀದಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು. ನಂತರ ಬಡವರು ಮತ್ತು ನಿರ್ಗತಿಕರಿಗೆ ದಾನ, ಧರ್ಮ ಮಾಡುತ್ತಿದ್ದರು. ಈಗ ಎಲ್ಲರೂ ಕೊರೋನ ಲಾಕ್‌ಡೌನ್ ಕಾರಣಕ್ಕೆ ಮನೆಯಲ್ಲೇ ಇದ್ದು ನಮಾಝ್ ಮಾಡುತ್ತಿದ್ದಾರೆ. ಸ್ನೇಹಿತರು ಮತ್ತು ಬಂಧು-ಬಾಂಧವರು ಒಟ್ಟಾಗುವ ಭಾಗ್ಯ ಇಲ್ಲದಂತೆ ಆಗಿದೆ.

ಪ್ರತಿದಿನ ಹಬ್ಬದ ಹೊರತಾಗಿಯೂ ಮೀನಾರುಗಳಲ್ಲಿ ಕಟ್ಟಿದ ಧ್ವನಿ ವರ್ಧಕಗಳಲ್ಲಿ ಸಹ್ರಿಯ ಘೋಷಣೆ ಇಂಪಾಗಿ ಕೇಳುತ್ತಿತ್ತು. ಅಝಾನ್ ಕೇಳುತ್ತಲೇ ಮನೆಗಳಲ್ಲಿ ಸಿಹಿ ಮತ್ತು ಖಾರದ ಖಾದ್ಯಗಳ ತಯಾರಿಗೆ ಮನೆಮಂದಿ ತೊಡಗುತ್ತಿದ್ದರು. ಇವೆಲ್ಲಕ್ಕೂ ಈಗ ತಾತ್ಕಾಲಿಕ ಬಿಡುವು ಬಿದ್ದಿದೆ. ಇದರಿಂದ ಸಂಜೆಯ ವೇಳೆ ಮಸೀದಿಗಳಲ್ಲಿ ಮೊಳಗುತ್ತಿದ್ದ ನಾಥ್ (ಪ್ರವಾದಿಯ ಸ್ತುತಿ ಗೀತೆ) ಈ ಬಾರಿ ಮೌನವಾಗಿದೆ. ಪ್ರತಿ ದಿನದ ಐದು ಹೊತ್ತಿನ ನಮಾಝ್ ಅಲ್ಲದೆ ರಾತ್ರಿ ವೇಳೆ ಮಸೀದಿಗಳಲ್ಲಿ ವಿಶೇಷ ನಮಾಝ್ (ತರಾವಿಹ್) ಇರುತ್ತದೆ. ಇದು ಈಗ ಮನೆಗೆ ಸೀಮಿತವಾಗಿದೆ. ರಮಝಾನ್ ತಿಂಗಳಲ್ಲಿ ಮಸೀದಿಗಳು ಅಲ್ಲದೆ ಹೊರಗೂ ಕೆಲವೆಡೆ ಇಫ್ತಾರ್ ಕೂಟ ಆಯೋಜಿಸಲಾಗುತ್ತಿತ್ತು. ಸಾಮೂಹಿಕ ಉಪವಾಸ ತೊರೆಯಲು ಈ ಏರ್ಪಾಡು ಮಾಡಲಾಗುತ್ತಿತ್ತು. ಈಗ ಇದಕ್ಕೂ ನಿರ್ಬಂಧ ಇರುವುದರಿಂದ ಎಲ್ಲಿ ಕೂಡ ಈ ಆಯೋಜನೆ ಕಂಡುಬರುತ್ತಿಲ್ಲ.

ಸರಕಾರದ ನಿಯಮಗಳನ್ನು ಪಾಲಿಸಿಕೊಂಡೇ ನಮ್ಮ ಇಬಾದತ್‌ಗಳು (ಆಚರಣೆ) ನಡೆಯುತ್ತಿದೆ. ಹಣ, ಆಹಾರದ ಕೊರತೆ ಇದ್ದರೂ, ಆರಾಧನೆಗೆ ಯಾವುದೇ ಮಿತಿ ಇಲ್ಲ. ಈ ಸಮಯ ಕುರ್‌ಆನ್ ಪಠಿಸಲು ಹೆಚ್ಚು ಅವಕಾಶ ಸಿಗುತ್ತದೆ. ಈಗ ಅಲ್ಲಾ ಕಷ್ಟಕಾಲ ಕೊಟ್ಟಿರಬಹುದು. ಮುಂದೆ ಒಳ್ಳೆ ದಾರಿ ತೋರುತ್ತಾನೆ. ಹೀಗಾಗಿ, ವಿಶ್ವಾಸ ಇಟ್ಟು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ತನ್ವೀರ್ ಅಹಮದ್ ತಿಳಿಸಿದ್ದಾರೆ.

ನಿಂತಿಲ್ಲ ದಾನ

ಲಾಕ್‌ಡೌನ್ ನಡುವೆಯೂ ಬಡವರಿಗೆ, ನಿರ್ಗತಿಕರಿಗೆ ಬಟ್ಟೆ, ಹಣವನ್ನು ನೀಡಲಾಗುತ್ತಿದೆ. ಅಲ್ಲದೇ ಹಲವೆಡೆ ಮನೆಯಲ್ಲಿಯೇ ಬಿರಿಯಾನಿ, ಪಲ್ಲಾವ್, ಪಾಯಸ, ಪಾನೀಯ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ಮುಸ್ಲಿಮ್ ಸಮುದಾಯದ ಜನರು ಲಾಕ್‌ಡೌನ್‌ನಿಂದ ತೊಂದರೆ ಗೀಡಾಗಿರುವವರಿಗೆ ನೀಡುತ್ತಿದ್ದಾರೆ.

Writer - ಯುವರಾಜ್ ಮಾಳಗಿ

contributor

Editor - ಯುವರಾಜ್ ಮಾಳಗಿ

contributor

Similar News