ಮದ್ಯವರ್ಜನೆಗೆ ಇದು ಸಕಾಲ : ಕಲ್ಕೂರ
ಮಂಗಳೂರು, ಮೇ 4: ಲಾಕ್‌ಡೌನ್‌ನಿಂದಾಗಿ ಕಳೆದ 40 ದಿನಗಳಿಂದ ರಾಜ್ಯದ ಮದ್ಯಪಾನಿಗಳು ಮದ್ಯವಿಲ್ಲದೆ ಬದುಕಿನಲ್ಲಿ ನೆಮ್ಮದಿಯನ್ನು ಕಂಡುಕೊಂಡಿದ್ದರು. ಸಾಂಸಾರಿಕವಾಗಿ ಮತ್ತು ಆರ್ಥಿಕವಾಗಿ ಹಾಗೂ ಆರೋಗ್ಯ ನೆಲೆಯಲ್ಲೂ ಈ ಪಿಡುಗಿನಿಂದ ಮುಕ್ತರಾಗಿ ಹೆಚ್ಚು ಸಬಲರಾ ಗಿದ್ದರು. ಇದೀಗ ಸರಕಾರ ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ಮತ್ತೆ ಸಮಾಜ, ಮನೆಯಲ್ಲಿ ನೆಮ್ಮದಿ ಕೆಡುವ ಸಾಧ್ಯತೆ ಇದೆ. ಹಾಗಾಗಿ ಮದ್ಯವರ್ಜನೆಗೆ ಇದು ಸಕಾಲ ಎಂದು ಸರಕಾರ ಮನಗಂಡು ಸೂಕ್ತ ನಿರ್ಧಾರ ತಾಳಬೇಕಿದೆ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ತಿಳಿಸಿದ್ದಾರೆ.
ಈಗಾಗಲೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮದ್ಯವರ್ಜನ ಶಿಬಿರದ ಮೂಲಕ ಸಾವಿರಾರು ಮಂದಿಯನ್ನು ಮದ್ಯಮುಕ್ತಗೊಳಿಸಿದ್ದಾರೆ. ಅದನ್ನು ಸರಕಾರ ಮಾದರಿಯನ್ನಾಗಿಸಬೇಕು. ಸರಕಾರ ನೀಡುವ ಸವಲತ್ತುಗಳು ಸಂಸಾರದ ನಿರ್ವಹಣೆಗೆ ವಿನಿಯೋಗವಾಗುವ ಬದಲು ಮದ್ಯದಂಗಡಿ ಪಾಲಾಗುವ ಸಾಧ್ಯತೆ ಇದೆ. ಈಗಾಗಲೇ ಗುಜರಾತ್‌ನಲ್ಲಿ ಮದ್ಯಪಾನ ನಿಷೇದ ಕಾನೂನು ಜಾರಿಯಲ್ಲಿದ್ದು ಅದನ್ನು ಕರ್ನಾಟಕ ದಲ್ಲೂ ಜಾರಿಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಬೇಕು ಎಂದು ಕಲ್ಕೂರಾ ಒತ್ತಾಯಿಸಿದ್ದಾರೆ.