×
Ad

ಉಡುಪಿ: 36 ಗಂಟಲು ದ್ರವದ ಮಾದರಿ ನೆಗೆಟಿವ್

Update: 2020-05-04 20:04 IST

ಉಡುಪಿ, ಮೇ 4: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್- 19) ಸೋಂಕಿಗಾಗಿ ಪರೀಕ್ಷೆಗೆ ಕಳುಹಿಸಿದ್ದ 67 ಗಂಟಲು ದ್ರವದ ಮಾದರಿಗಳಲ್ಲಿ 38ರ ವರದಿ ಸೋಮವಾರ ಬಂದಿದ್ದು, ಎಲ್ಲವೂ ನೆಗೆಟ್ ಫಲಿತಾಂಶವನ್ನು ತೋರಿಸಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಕೋವಿಡ್-19ರ ವಿವಿಧ ಗುಣಲಕ್ಷಣದ ಇನ್ನೂ 36 ಸ್ಯಾಂಪಲ್ ಗಳನ್ನು ಪಡೆದು ಪರೀಕ್ಷೆಗಾಗಿ ಮಂಗಳೂರು ಪ್ರಯೋಗಾಲಯಕ್ಕೆ ಕಳುಹಿಸ ಲಾಗಿದೆ. ಈ ಮೂಲಕ ಒಟ್ಟು 65 ಸ್ಯಾಂಪಲ್‌ಗಳ ಪರೀಕ್ಷೆ ಜಿಲ್ಲೆಯಿಂದ ಬಾಕಿ ಉಳಿದಿದೆ ಎಂದವರು ಹೇಳಿದರು.

ಸೋಮವಾರ ಮಾದರಿ ಸಂಗ್ರಹಿಸಿದ 36 ಮಂದಿಯಲ್ಲಿ ಒಬ್ಬರು ಕೋವಿಡ್ ಶಂಕಿತರಾದರೆ, 10 ಮಂದಿ ಕೋವಿಡ್ ಶಂಕಿತರ ಸಂಪರ್ಕಕ್ಕೆ ಬಂದವರು. ಉಳಿದಂತೆ ಆರು ಮಂದಿ ತೀವ್ರ ಉಸಿರಾಟದ ತೊಂದರೆಯವರು, ಐವರು ಶೀತಜ್ವರದಿಂದ ಬಳಲುವವರು ಹಾಗೂ 14 ಮಂದಿ ಕೊರೋನ ಹಾಟ್‌ಸ್ಪಾಟ್‌ನಿಂದ ಬಂದವರ ಸ್ಯಾಂಪಲ್‌ಗಳು ಇಂದು ಪರೀಕ್ಷೆಗೆ ಕಳುಹಿಸಿ ದರಲ್ಲಿ ಸೇರಿವೆ ಎಂದು ಡಾ. ಸೂಡ ತಿಳಿಸಿದರು.

ಜಿಲ್ಲೆಯಲ್ಲಿ ಸೋಮವಾರದವರೆಗೆ ಒಟ್ಟು 1230 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 1165ರ ವರದಿ ಬಂದಿದ್ದು, 1162 ನೆಗೆಟಿವ್ ಆಗಿವೆ. ಜಿಲ್ಲೆಯಲ್ಲಿ ಇದುವರೆಗೆ ಕೇವಲ ಮೂವರ ಸ್ಯಾಂಪಲ್ ಮಾತ್ರ ಪಾಸಿಟಿವ್ ಆಗಿ ಬಂದಿದೆ. ಅವರೆಲ್ಲರೂ ಈಗಾಗಲೇ ಚಿಕಿತ್ಸೆಯಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದರು.

ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ರೋಗದ ಲಕ್ಷಣ ಹೊಂದಿರುವ 7 ಮಂದಿ ಇಂದು ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಮೂವರು ಪುರುಷರು ಹಾಗೂ ನಾಲ್ಕು ಮಂದಿ ಮಹಿಳೆಯರಿದ್ದಾರೆ. ಇಬ್ಬರು ಕೋವಿಡ್ ಶಂಕಿತರು, ಮೂವರು ತೀವ್ರತರದ ಉಸಿರಾಟ ತೊಂದರೆ ಇರುವವರು ಹಾಗೂ ಇಬ್ಬರು ಶೀತಜ್ವರದ ಬಾಧೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು 16 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದು, 46 ಮಂದಿ ಇನ್ನೂ ಅದೇ ವಾರ್ಡಿನಲ್ಲಿ ವೈದ್ಯರ ನಿಗಾದಲ್ಲಿದ್ದಾರೆ. ಒಟ್ಟು 375 ಮಂದಿ ಈವರೆಗೆ ಆಸ್ಪತ್ರೆಯ ಐಸೋಲೇಶನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್-19ರ ವಿವಿಧ ಹಿನ್ನೆಲೆಯೊಂದಿಗೆ ಇಂದು 92 ಮಂದಿ ಯನ್ನು ಹೊಸದಾಗಿ ನೋಂದಣಿ ಮಾಡಿಕೊಳ್ಳಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಒಟ್ಟು 3825 ಮಂದಿಯನ್ನು ತಪಾಸಣೆಗಾಗಿ ನೋಂದಣಿ ಮಾಡಿ ಕೊಂಡಂತಾಗಿದೆ. ಇವರಲ್ಲಿ 2383 (ಇಂದು 33) ಮಂದಿ 28 ದಿನಗಳ ನಿಗಾವನ್ನೂ, 3229 (43) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿ ದ್ದಾರೆ. ಜಿಲ್ಲೆಯಲ್ಲಿ ಒಟ್ಟು 504 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 46 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದರು.

ಶಿರೂರು ವ್ಯಕ್ತಿಯ ವರದಿ ಸೇರಿಲ್ಲ: ಶುಕ್ರವಾರ ಮುಂಜಾನೆ ಬೆಳಗಾವಿಯಿಂದ 10 ಮಂದಿ ಸ್ನೇಹಿತರೊಂದಿಗೆ ಬೈಂದೂರಿ ಶಿರೂರಿಗೆ ಮರಳಿ ಬಂದು ಕೊರೋನ ಪಾಸಿಟಿವ್ ವದಂತಿಗೆ ಕಾರಣರಾಗಿದ್ದ ವ್ಯಕ್ತಿಯ ಗಂಟಲು ದ್ರವದ ಮಾದರಿಯ ವರದಿ ಇಂದು ಸಹ ಬಂದಿಲ್ಲ. ಹೀಗಾಗಿ ಅವರೀಗಲೂ ಕುಂದಾಪುರ ಖಾಸಗಿ ಆಸ್ಪತ್ರೆಯ ಐಸೋಲೇಶನ್ ವಾರ್ಡಿನಲ್ಲಿದ್ದು, ಅವರ 9 ಮಂದಿ ಜೊತೆಗಾರರು ಕುಂದಾಪುರ ಮತ್ತು ಉಡುಪಿ ಯಲ್ಲಿ ಕ್ವಾರಂಟೈನ್‌ನಲ್ಲಿ ಮುಂದುವರಿದಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.

ಜಿಲ್ಲೆ ಪ್ರವೇಶಿಸುವವರಿಗೆಲ್ಲಾ ಕ್ವಾರಂಟೈನ್ ಸೀಲ್ 

ಜಿಲ್ಲೆ ಪ್ರವೇಶಿಸುವವರಿಗೆಲ್ಲಾ ಕ್ವಾರಂಟೈನ್ ಸೀಲ್ ಕೇಂದ್ರ ಸರಕಾರದ ಸೂಚನೆ, ರಾಜ್ಯ ಸರಕಾರದ ಆದೇಶದಂತೆ ಅನ್ಯ ರಾಜ್ಯ ಹಾಗೂ ಅನ್ಯ ಜಿಲ್ಲೆಗಳಿಂದ ಉಡುಪಿಗೆ ಬರಲು ಒಂದು ಸಾರಿಯ ಅವಕಾಶ ಪಡೆದಿರುವ ಎಲ್ಲರಿಗೂ ಜಿಲ್ಲೆ ಪ್ರವೇಶಿಸುವ 0ೆಕ್‌ಪೋಸ್ಟ್‌ನಲ್ಲಿ ಅವರ ದೈಹಿಕ ಸ್ಥಿತಿ ಗನುಗುಣವಾಗಿ ಕ್ವಾರಂಟೈನ್ ಸೀಲ್ ಹಾಕಲಾಗುವುದು ಎಂದು ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಅನ್ಯ ಜಿಲ್ಲೆಗಳಿಂದ ಬರುವ ಎಲ್ಲರನ್ನೂ ಚೆಕ್‌ಪೋಸ್ಟ್‌ಗಳಲ್ಲಿ ದೈಹಿಕ ತಪಾಸಣೆ ನಡೆಸಲಿದ್ದು, ಯಾವುದೇ ರೀತಿಯ ಕೊರೋನ ಗುಣಲಕ್ಷಣ ಗಳಿಲ್ಲದಲ್ಲಿ ಹೋಮ್ ಕ್ವಾರಂಟೈನ್ ಸೀಲ್ ಹಾಕಿದರೆ, ಉಷ್ಣತಾ ಪರೀಕ್ಷೆ ವೇಳೆ ಜ್ವರದ ಅಥವಾ ಕೆಮ್ಮು, ಶೀತ, ಉಸಿರಾಟ ತೊಂದರೆಯ ಲಕ್ಷಣ ವಿದ್ದರೆ ಆಸ್ಪತ್ರೆ ಕ್ವಾರಂಟೈನ್‌ನ ಸೀಲ್ ಹಾಕಲಾಗುತ್ತದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಇದು ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬರಿಗೂ ಕಡ್ಡಾಯ ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News