ಉಡುಪಿ: ಕೊರೋನ ಲಾಕ್‌ಡೌನ್ ನಿರ್ಬಂಧ ಸಡಿಲಿಕೆ
ಉಡುಪಿ, ಮೇ 4: ಮಂಗಳವಾರದಿಂದ (ಮೇ 5) ಉಡುಪಿ ಜಿಲ್ಲೆಯಾದ್ಯಂತ ಕೊರೋನ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ತೆರೆದಿರಿಸಲು ನಿರ್ಧರಿಸಲಾಗಿದೆ.
ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಈ ಬಗ್ಗೆ ಇಂದು ಹೊಸ ಆದೇಶವನ್ನು ಹೊರಡಿಸಿದ್ದು, ಇದರಲ್ಲಿ ಈ ಬದಲಾವಣೆಯನ್ನು ಮಾಡಲಾಗಿದೆ. ಇಂದು ಜಿಲ್ಲೆಯಾದ್ಯಂತ ಬೆಳಗ್ಗೆ 7ರಿಂದ ಅಪರಾಹ್ನ 1ಗಂಟೆಯವರೆಗೆ ಮಾತ್ರ ಅಂಗಡಿಗಳನ್ನು ತೆರೆದಿಡಲು ಅನುಮತಿ ನೀಡಲಾಗಿತ್ತು.
ಸರಕಾರ ಮೇ 2ರಂದು ಹೊರಡಿಸಿದ ಆದೇಶದಲ್ಲಿ ಲಾಕ್‌ಡೌನ್‌ನಲ್ಲಿ ಕೆಲವೊಂದು ವಿನಾಯಿತಿಗಳನ್ನು ನೀಡಲಾಗಿತ್ತು. ಇದರಂತೆ ಸಾರ್ವಜನಿಕರಿಗೆ ಅವಶ್ಯಕ ವಸ್ತುಗಳನ್ನು ಖರೀದಿಸಲು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಅಬಕಾರಿ ಇಲಾಖೆಯ ಆದೇಶದಂತೆ ಎಂಎಸ್‌ಐಎಲ್ ಹಾಗೂ ವೈನ್‌ಶಾಪ್‌ಗಳಲ್ಲಿ ಮದ್ಯಮಾರಾಟಕ್ಕೆ ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಅವಕಾಶ ಕಲ್ಪಿಸಲಾಗಿತ್ತು.
ಆದರೆ ಉಡುಪಿ ಜಿಲ್ಲೆಯ ಮಟ್ಟಿಗೆ ಎಲ್ಲಾ ಅಂಗಡಿಗಳ ವ್ಯವಹಾರವನ್ನು ಬೆಳಗ್ಗೆ 7ರಿಂದ 11ರವರೆಗಿದ್ದುದನ್ನು ಎರಡು ಗಂಟೆ ಮಾತ್ರ ಹೆಚ್ಚಿಸಲು ನಿರ್ಧರಿಸಲಾ ಗಿತ್ತು. ಅದೇ ರೀತಿ ಮದ್ಯ ಮಾರಾಟಕ್ಕೆ ಬೆಳಗ್ಗೆ 7ರಿಂದ ಅಪರಾಹ್ನ 1ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಇಂದು ದಿನದ ವಸ್ತುಸ್ಥಿತಿ ಯನ್ನು ಪರಿಶೀಲಿಸಿದಾಗ ಈ ಸಮಯದಲ್ಲಿ ಎಲ್ಲಾ ಅಂಗಡಿಗಳಲ್ಲಿ ಜನದಟ್ಟನೆ ಉಂಟಾಗಿದ್ದು, ಸುರಕ್ಷಿತಾ ಅಂತರ ಕಾಪಾಡಲು ಸಮಸ್ಯೆ ಎದುರಾಗಿರುವುದು ಕಂಡುಬಂದಿತ್ತು.
ಆದ್ದರಿಂತ ಸರಕಾರದ ಆದೇಶದಲ್ಲಿ ತಿಳಿಸಿದಂತೆ ಸಮಯವನ್ನು ವಿಸ್ತರಿಸಲು ಜಿಲ್ಲಾಡಳಿತ ನಿರ್ಧರಿಸಿ, ಈ ಹಿಂದೆ ನಿಗದಿ ಪಡಿಸಿದ ಸಮಯವನ್ನು ಪರಿಷ್ಕರಿಸಿ, ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಯಿತು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆದರೆ ಸಂಜೆ 7 ರಿಂದ ಮರುದಿನ ಬೆಳಗ್ಗೆ 7 ರವರೆಗೆ ಸಾರ್ವಜನಿಕ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಎಲ್ಲಾ ಗ್ರಾಹಕರು, ಸಿಬ್ಬಂದಿಗಳು ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸಿರಬೇಕು. ಸುರಕ್ಷಿತ ಅಂತರವನ್ನು ಕಾಪಾಡುವ ದೃಷ್ಟಿಯಿಂದ ಎಲ್ಲಾ ಅಂಗಡಿಗಳ ಮುಂದೆ ಆರು ಅಂಡಿಗಳ ಅಂತರದಲ್ಲಿ ಗುರುತು ಹಾಕಿರಬೇಕು. ಹಾಗೂ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಸರಕಾರದ ಎಲ್ಲಾ ಆದೇಶ ಹಾಗೂ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ತಪ್ಪಿದಲ್ಲಿ ಐಪಿಸಿ ಸೆಕ್ಷನ್ 188 ಹಾಗೂ ಪ್ರಾಕೃತಿಕ ವಿಕೋಪ ನಿರ್ವಹಣಾ ಕಾಯ್ದೆ 2005ರ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.