×
Ad

ಕೊಂಕಣ ರೈಲ್ವೆಯಿಂದ ಮೇ 5ರಂದು ಪಾರ್ಸೆಲ್ ವಿಶೇಷ ರೈಲು

Update: 2020-05-04 20:40 IST

ಉಡುಪಿ, ಮೇ 4: ಪಶ್ಚಿಮ ರೈಲ್ವೆಯ ಸಹಯೋಗದೊಂದಿಗೆ ಕೊಂಕಣ ರೈಲ್ವೆ ಓಕಾ ಹಾಗೂ ತಿರುವನಂತಪುರಂ ನಡುವೆ ಮತ್ತೊಂದು ವಿಶೇಷ ಪಾರ್ಸೆಲ್ ರೈಲನ್ನು ಓಡಿಸಲು ನಿರ್ಧರಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲು ನಂ. 00933 ಓಕಾ-ತಿರುವನಂತಪುರಂ ಸೆಂಟ್ರಲ್ ಪಾರ್ಸೆಲ್ ವಿಶೇಷ ರೈಲು ಮೇ 5ರಂದು ಅಪರಾಹ್ನ 1.:10ಕ್ಕೆ ಓಕಾದಿಂದ ಪ್ರಯಾಣ ಪ್ರಾರಂಭಿಸ ಲಿದ್ದು, ಮೇ 7ರ 12:00 ಗಂಟೆಗೆ ತಿರುವನಂತಪುರಂ ಸೆಂಟ್ರಲ್ ತಲುಪಲಿದೆ. ಮರು ಪ್ರಯಾಣದಲ್ಲಿ ರೈಲು ನಂ.00934 ತಿರುವನಂತಪುರಂ ಸೆಂಟ್ರಲ್‌ನಿಂದ ರಾತ್ರಿ 11:00ಕ್ಕೆ ಪ್ರಯಾಣ ಬೆಳೆಸಲಿದ್ದು, 9ರಂದು ರಾತ್ರಿ 9:40ಕ್ಕೆ ಓಕಾ ತಲುಪಲಿದೆ.

ರೈಲು ತನ್ನ ಪ್ರಯಾಣದ ವೇಳೆ ಮೇ 6ರ ರಾತ್ರಿ 9:00ಗಂಟೆಗೆ ಹಾಗೂ ಮೇ 8ರ ಅಪರಾಹ್ನ 1:20ಕ್ಕೆ ಉಡುಪಿ ನಿಲ್ದಾಣಕ್ಕೆ ಆಗಮಿಸಲಿದೆ. ರೈಲಿಗೆ ಜಾಮ್‌ನಗರ, ರಾಜ್‌ಕೋಟ್, ಸುರೇಂದ್ರನಗರ, ಅಹ್ಮದಾಬಾದ್, ಆನಂದ್, ವಡೋದರ, ಬರುಚಾ, ಸೂರತ್, ವಾಸೈ ರೋಡ್, ಪನ್ವೇಲ್, ರೋಹಾ, ರತ್ನಗಿರಿ, ಕನಕವಾಲಿ, ಮಡಗಾಂವ್ ಜಂಕ್ಷನ್, ಉಡುಪಿ, ಮಂಗಳೂರು ಜಂಕ್ಷನ್, ಕಣ್ಣೂರು, ಕಲ್ಲಿಕೋಟೆ, ಶೋರನೂರ್ ಜಂಕ್ಷನ್, ತ್ರಿಶೂರ್, ಎರ್ನಾಕುಲಂ ನಗರ, ಕೊಟ್ಟಾಯಂ ಹಾಗೂ ಕೊಟ್ಟಾಯಂ ಜಂಕ್ಷನ್‌ಗಳಲ್ಲಿ ವ್ಯವಹಾರದ ನಿಲುಗಡೆಯನ್ನು ಹೊಂದಿರುತ್ತದೆ.
ಈ ಪಾರ್ಸೆಲ್ ರೈಲಿನಲ್ಲಿ ತಮ್ಮ ಯಾವುದೇ ವಸ್ತುಗಳ ಪಾರ್ಸೆಲ್‌ಗಳನ್ನು ಕಳುಹಿಸಲು ಇಚ್ಛಿಸುವವರು ಕೊಂಕಣ ರೈಲ್ವೆಯ ರತ್ನಗಿರಿ, ಕನಕವಾಲಿ, ಮಡಂಗಾವ್ ಹಾಗೂ ಉಡುಪಿ ನಿಲ್ದಾಣಗಳಲ್ಲಿರುವ ಪಾರ್ಸೆಲ್ ಕಚೇರಿಗಳನ್ನು ಸಂಪರ್ಕಿಸುವಂತೆ ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

17ರವರೆಗೆ ಪ್ರಯಾಣ ರೈಲು ರದ್ದು: ಕೇಂದ್ರ ಸರಕಾರ ಕೋವಿಡ್-19ರ ನಿಯಂತ್ರಣಕ್ಕಾಗಿ ಹೇರಿರುವ ಲಾಕ್‌ಡೌನ್‌ನ್ನು ಎರಡು ವಾರ ವಿಸ್ತರಿಸಿರುವುದ ರಿಂದ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಮೈಲ್, ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಮೇ 17ರವರೆಗೆ ರದ್ದುಗೊಳಿಸಿದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್.ಕೆ.ವರ್ಮ ತಿಳಿಸಿದ್ದಾರೆ.

ಆದರೆ ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ರಾಜ್ಯ ಸರಕಾರಗಳ ಕೋರಿಕೆಯ ಮೇರೆಗೆ ಲಾಕ್‌ಡೌನ್‌ನಿಂದ ರಾಜ್ಯಗಳಲ್ಲಿ ಸಿಕ್ಕಿಬಿದ್ದಿರುವ ವಲಸೆ ಕಾರ್ಮಿಕರು, ತೀರ್ಥಯಾತ್ರೆಯವರು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಇತರ ಜನರ ಪ್ರಯಾಣಕ್ಕೆ ವಿಶೇಷ ಶ್ರಮಿಕ್ ರೈಲುಗಳನ್ನು ಅಗತ್ಯಬಿದ್ದಾಗ ಓಡಿಸ ಲಾಗುತ್ತದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News