ಅಸ್ಸಾಂ:ಮಾಜಿ ಉಗ್ರನ ಸುಟ್ಟ ಶವ ಪತ್ತೆ

Update: 2020-05-04 16:50 GMT

ಹೊಸದಿಲ್ಲಿ,ಮೇ 4: ಅಸ್ಸಾಮಿನ ದಿಮಾ ಹಸಾವೊ ಜಿಲ್ಲೆಯ ಹರಂಗಜಾವೊ ಗ್ರಾಮದ ನಿವಾಸಿ,ವೃತ್ತಿಯಲ್ಲಿ ಗುತ್ತಿಗೆದಾರನಾಗಿದ್ದ ಮಾಜಿ ಉಗ್ರ ಸಂತೋಷ ಹೋಜಾಯ್(36) ಎಂಬಾತನ ಸುಟ್ಟು ಕರಕಲಾದ ಶವವು ರಾ.ಹೆ.27ರ ಬಳಿಯ ಲೈಲಿಂಗ್ ಮೀಸಲು ಅರಣ್ಯದಲ್ಲಿ ಎ.30ರಂದು ಪತ್ತೆಯಾಗಿದೆ. ಎ.24ರಂದು ಮಪ್ತಿಯಲ್ಲಿದ್ದ ಐವರು ಶಸ್ತ್ರಸಜ್ಜಿತ ಪೊಲೀಸರು ಹೋಜಾಯ್‌ನನ್ನು ಆತನ ಮನೆಯಿಂದ ಕರೆದೊಯ್ದಿದ್ದರು ಎನ್ನಲಾಗಿದ್ದು,ಅವರೇ ಆತನ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

 ತನ್ನ ಪತಿಯ ಹತ್ಯೆ ಹಿಂದೆ ಡಿವೈಎಸ್‌ಪಿ ಸುರ್ಜಾ ಕಾಂತಾ ಮೊರಾಂಗ್ ಕೈವಾಡವಿದೆ ಎಂದು ಮೃತನ ಪತ್ನಿ ಜಯಂತ ಹೋಜಾಯ್ ಆರೋಪಿಸಿದ್ದಾರೆ. ಆರೋಪದ ಕುರಿತು ರಾಜ್ಯ ಸರಕಾರವಾಗಲೀ ಪೊಲೀಸರಾಗಲೀ ಈವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈ ಬಗ್ಗೆ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಯೋರ್ವರನ್ನು ದಿಮಾ ಹಸಾವೊ ಜಿಲ್ಲೆಗೆ ಕಳುಹಿಸಲಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಗುವಾಹಟಿ ಉಚ್ಚ ನ್ಯಾಯಾಲಯವು ಈ ವಿಷಯದಲ್ಲಿ ಡಿಜಿಪಿಯಿಂದ ವರದಿಯನ್ನು ಕೇಳಿದೆ.

ದಿಮಾ ಹಲಾಮ್ ದಾವೊಗಾ ಬಂಡುಕೋರ ಗುಂಪಿನ ಸದಸ್ಯನಾಗಿದ್ದ ಹೋಜಾಯ್ 2013ರಲ್ಲಿ ಅದು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ ಬಳಿಕ ಸಾಮಾಜಿಕ ಕಾರ್ಯಕರ್ತನಾಗಿದ್ದ,ಜೊತೆಗೆ ಗುತ್ತಿಗೆದಾರನೂ ಆಗಿದ್ದ. ಕೆಲ ಸಮಯದ ಹಿಂದೆ ಆತ ಬಿಜೆಪಿಗೆ ಸೇರಿದ್ದ.

ಮೊರಾಂಗ್ ಕ್ಯಾನ್‌ವೊಂದರಲ್ಲಿ ಡೀಸಿಲ್ ಖರೀದಿಸಿದ ದೃಶ್ಯ ಮೈಬಾಂಗ್ ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಎ.24ರಂದು ಸಂಜೆ ಬೊಲೆರೊ ವಾಹನದಲ್ಲಿ ಬಂದು ತನ್ನ ಪತಿಯನ್ನು ಅಪಹರಿಸಿದ್ದವರಲ್ಲಿ ಮೊರಾಂಗ್ ಕೂಡ ಇದ್ದರು. ಡೀಸಿಲ್‌ನ್ನು ತನ್ನ ಪತಿಯನ್ನು ಸುಡಲು ಬಳಸಲಾಗಿದೆ ಎನ್ನುವುದು ತನಗೆ ಖಾತ್ರಿಯಾಗಿದೆ ಎಂದು ಸುದ್ದಿಸಂಸ್ಥೆ ಜೊತೆ ದೂರವಾಣಿಯಲ್ಲಿ ಮಾತನಾಡಿದ ಜಯಂತ್ ತಿಳಿಸಿದರು.

ಹೋಜಾಯ್ ಅಪಹರಣದ ಬಳಿಕ ತಾನು ದೂರನ್ನು ದಾಖಲಿಸಲು ಪೊಲೀಸ್ ಠಾಣೆಗೆ ಧಾವಿಸಿದ್ದೆ. ಆದರೆ ಅದನ್ನು ಸ್ವೀಕರಿಸಲು ನಿರಾಕರಿಸಿದ್ದ ಅಧಿಕಾರಿ,ಆತ ಸುರಕ್ಷಿತವಾಗಿದ್ದಾನೆ ಮತ್ತು ಮರುದಿನ ಮನೆಗೆ ಮರಳುತ್ತಾನೆ ಎಂದು ತಿಳಿಸಿದ್ದ ಎಂದೂ ಜಯಂತ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News