×
Ad

ಉಡುಪಿ: 'ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ' ಸರಕಾರದ ವಿರುದ್ಧ ಹಿರಿಯ ಮಹಿಳೆ ಕೆಂಡಾಮಂಡಲ

Update: 2020-05-04 22:58 IST

ಉಡುಪಿ, ಮೇ 4: ಲಾಕ್‌ಡೌನ್ ನಡುವೆಯೂ ಮದ್ಯ ಮಾರಾಟ ಮಾಡಲು ಅನುಮತಿ ನೀಡಿದ ಸರಕಾರದ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದು ಕೊಂಡಿರುವ ಉಡುಪಿ ಸಮೀಪದ ಕಟಪಾಡಿಯ ಹಿರಿಯ ಮಹಿಳೆಯೊಬ್ಬರು ತನ್ನ ಆಕ್ರೋಶವನ್ನು ವಿಡಿಯೋ ಒಂದರಲ್ಲಿ ಹೊರಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ಸರಕಾರದ ಈ ಕ್ರಮದಿಂದ ನಿನ್ನೆಯವರೆಗೆ ಊಟಕ್ಕೂ ಹಣವಿಲ್ಲ ಎಂದು ಯಾರು ಅಂಗಲಾಚುತ್ತಿದ್ದರೋ, ಅವರೆಲ್ಲ ಇಂದು ವೈನ್‌ಶಾಪ್‌ಗಳ ಮುಂದೆ 500 ರೂ. ನೋಟು ಹಿಡಿದು ಸಾಲು ನಿಂತಿದ್ದಾರೆ.’ ಎಂದು ಕಾಪು ತಾಲೂಕು ಕಟಪಾಡಿಯ ಸುಲತಾ ಕಾಮತ್ ಸರಕಾರದ ವಿರುದ್ಧ ಕೆಂಡಾಮಂಡಲರಾಗಿ ನುಡಿದ್ದಾರೆ. ಸುಲತಾ ಕಾಮತ್ ಕ್ರೀಡಾಪಟುವಾಗಿದ್ದು, ಹಿರಿಯರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದಾರೆ.

‘ನಾವು ದುಡಿದು ಸಂಪಾದಿಸೋಣ ಎಂದರೆ ಅಂಗಡಿ ತೆರೆಯಲು ನಮಗೆ ಅವಕಾಶ ನೀಡಲಿಲ್ಲ. ಆದರೆ ಈಗ ಬಾರ್‌ಗಳನ್ನು ತೆರೆಸಲು ಅನುಮತಿ ನೀಡಿದ ನಿಮಗೆ ಏನೂ ಅನ್ನಿಸುತ್ತಿಲ್ಲವಾ? ನಿಮಗೆ ನೈತಿಕತೆ ಇದೆಯೇ? ದುಡ್ಡು ಬರುತ್ತದೆ ಎಂದು ಇಂಥ ಕೆಲಸವನ್ನು ಸರಕಾರ ಮಾಡಬೇಕಿತ್ತಾ’ ಎಂದವರು ಪ್ರಶ್ನಿಸಿದ್ದಾರೆ.

‘ ಸರಕಾರ ಇಂಥವರಿಗೆ ಅಕ್ಕಿ, ಹಣ್ಣುಹಂಪಲು, ಹಾಲು ಮೊದಲಾದವುಗಳನ್ನು ನೀಡಿ ಇಷ್ಟು ದಿನ ಸಾಕುತ್ತಿತ್ತು. ಆದರೆ ನಮ್ಮಂತಹ ಬಡವರು ಚಹಾ ಮಾರಿ ಜೀವನ ಸಾಗಿಸುತ್ತೇವೆ ಎಂದರೆ ನಮಗೆ ಅಂಗಡಿ ತೆರೆಯಲು ಕೂಡ ಅವಕಾಶ ಕೊಡುತ್ತಿಲ್ಲ.’ ಎಂದು ಸರಕಾರದ ನೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮ್ಯಾರಥಾನ್ ಓಟಗಾರ್ತಿಯಾಗಿರುವ ಸುಲತಾ ಕಾಮತ್ ಅವರಿಗೆ ಉಡುಪಿ ಯಲ್ಲಿ ಈ ಹಿಂದೆ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅಣ್ಣಾಮಲೈ ಚಾ ಅಂಗಡಿ ತೆರೆಯಲು ಸಹಾಯ ಮಾಡಿದ್ದರು. ಅವರ ಅಂಗಡಿ ಈಗ ಲಾಕ್ ಡೌನ್ ಕಾರಣ ಮುಚ್ಚಲ್ಪಟ್ಟಿದೆ.

ಸಿಎಂ ಯಡಿಯೂರಪ್ಪ ಅವರನ್ನು ಮಾತ್ರವಲ್ಲದೇ, ಮದ್ಯಕ್ಕೆಂದು ಮುಗಿ ಬಿದ್ದಿರುವ ಜನರನ್ನೂ ತರಾಟೆಗೆ ತೆಗೆದುಕೊಂಡಿರುವ ಸುಲತಾ, ಇಷ್ಟು ದಿನ ಊಟಕ್ಕೆ ಹಣ ಇಲ್ಲದವರ ಹತ್ತಿರ ಇವತ್ತು ಮದ್ಯ ಖರೀದಿಗೆ ಹಣ ಎಲ್ಲಿಂದ ಬಂತು? ನಿನ್ನೆಯವರೆಗೆ ಉಚಿತ ಊಟಕ್ಕೆ ಸಾಲಲ್ಲಿ ನಿಂತವರು ಇವತ್ತು ವೈನ್ ಶಾಪ್ ಮುಂದೆ ನಿಂತಿದ್ದಾರೆ. ನಿನ್ನೆ ಇಲ್ಲದ ದುಡ್ಡು ಇಂದು ಎಲ್ಲಿಂದ ಬಂತು ಎಂದವರು ಖಡಕ್ಕಾಗಿ ಪ್ರಶ್ನಿಸಿದ್ದಾರೆ.

ಊಟಕ್ಕೆ ಇಲ್ಲ ಎಂದು ಕೂತು, ಇಂದು ಮದ್ಯಕ್ಕೆ ಮುಗಿಬಿದ್ದಿರುವ ಕುಡುಕರಿಗೆ ನೀವೇಕೆ ದಿನಸಿ ಕೊಟ್ಟಿರಿ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಅಕ್ಕಿ, ಹಣ್ಣು, ಹಂಪಲು ಎಲ್ಲವನ್ನೂ ನೀವು ಇಂಥವರಿಗೆ ಕೊಟ್ಟಿರಿ. ಇವರೆಲ್ಲ ಕೆಲಸಕ್ಕೆ ಹೋಗುತ್ತಾರಾ? ಇಂಥ ಸಮಯದಲ್ಲಿ ಸರಕಾರ ಮದ್ಯದಂಗಡಿ ತೆರೆದಿದೆ. ಐನೂರು ಕೊಟ್ಟು ಕುಡಿಯಲು ಎಲ್ಲ ಹೋಗುತ್ತಿದ್ದಾರೆ. ಹೆಂಡತಿ, ಮಕ್ಕಳನ್ನೂ ಬೀದಿಗೆ ತಳ್ಳುತ್ತಾರೆ. ಸರಕಾರಕ್ಕೆ ಬುದ್ಧಿ ಇಲ್ಲವಾ, ದುಡ್ಡು ಬರುತ್ತದೆ ಎಂದು ಇಂಥ ಕೆಲಸ ಮಾಡಬಹುದಾ? ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ.

ಒಂದು ಹೊತ್ತು ಊಟಕ್ಕೆ ಗತಿ ಇಲ್ಲ ಎಂದು ಹೇಳಿದವರೆಲ್ಲ ಇಂದು ಐನೂರು ರೂಪಾಯಿ ಕೊಟ್ಟು ಮದ್ಯ ತೆಗೆದುಕೊಳ್ಳುತ್ತಿದ್ದಾರೆ. ಒಳ್ಳೆ ಕೆಲಸ ಮಾಡುವವರಿಗೆ ನೀವು ಸಹಾಯ ಮಾಡುವುದಿಲ್ಲ. ಕುಡಿಯಲು ಅವಕಾಶ ಮಾಡಿಕೊಟ್ಟು ನೀವು ಯಾರನ್ನು ನಾಶ ಮಾಡಲು ಹೊರಟಿದ್ದೀರಿ? ನೀವು ಕೊರೋನ ನಾಶ ಮಾಡುತ್ತಿಲ್ಲ, ದೇಶವನ್ನೇ ನಾಶ ಮಾಡಲು ಹೊರಟಿದ್ದೀರಿ ಎಂದು ಸುಲತಾ ಕಾಮತ್ ಗುಡುಗಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News