ಡೇನಿಯಲ್ ಪರ್ಲ್‌ಗೆ ನ್ಯಾಯ ಸಿಗಲಿ: ಪಾಕ್‌ಗೆ ಅಮೆರಿಕ ಒತ್ತಾಯ

Update: 2020-05-04 17:49 GMT

ವಾಶಿಂಗ್ಟನ್, ಮೇ 4: ಹತ್ಯೆಗೀಡಾಗಿರುವ ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್‌ಗೆ ನ್ಯಾಯ ಸಿಗಬೇಕು ಎಂದು ಅಮೆರಿಕ ಪಾಕಿಸ್ತಾನವನ್ನು ಮತ್ತೊಮ್ಮೆ ಒತ್ತಾಯಿಸಿದೆ.

ಸಿಂಧ್ ಪ್ರಾಂತದ ನ್ಯಾಯಾಲಯವೊಂದು ನೀಡಿರುವ ತೀರ್ಪನ್ನು ಪ್ರಶ್ನಿಸಿ ಡೇನಿಯಲ್ ಪರ್ಲ್‌ರ ಕುಟುಂಬವು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ದಿನಗಳ ಬಳಿಕ ಅಮೆರಿಕ ಪಾಕಿಸ್ತಾನದ ಮೇಲೆ ಈ ರೀತಿಯಾಗಿ ಒತ್ತಡ ಹೇರಿದೆ.

ಪರ್ಲ್ ಹತ್ಯೆ ಪ್ರಕರಣದ ದೋಷಿಗಳಾಗಿರುವ ಬ್ರಿಟಿಶ್ ಸಂಜಾತ ಅಲ್-ಖಾಯಿದಾ ನಾಯಕ ಅಹ್ಮದ್ ಉಮರ್ ಸಯೀದ್ ಶೇಖ್ ಮತ್ತು ಇತರ ಮೂವರನ್ನು ಸಿಂಧ್‌ನ ನ್ಯಾಯಾಲಯವು ದೋಷಮುಕ್ತಗೊಳಿಸಿದೆ. ಅವರಿಗೆ 2002ರಲ್ಲಿ ಮರಣ ದಂಡನೆ ವಿಧಿಸಲಾಗಿತ್ತು.

ವಾಲ್ ಸ್ಟ್ರೀಟ್ ಜರ್ನಲ್‌ನ ದಕ್ಷಿಣ ಏಶ್ಯ ಬ್ಯೂರೋ ಮುಖ್ಯಸ್ಥ, 38 ವರ್ಷದ ಪರ್ಲ್ 2002ರಲ್ಲಿ ಪಾಕಿಸ್ತಾನದಲ್ಲಿದ್ದಾಗ ಅವರನ್ನು ಅಪಹರಿಸಿ ತಲೆಕಡಿಯಲಾಗಿತ್ತು. ಅವರು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಮತ್ತು ಅಲ್-ಖಾಯಿದಾ ಉಗ್ರಗಾಮಿ ಸಂಘಟನೆಯ ನಡುವಿನ ಕೊಂಡಿಯ ಬಗ್ಗೆ ತನಿಖೆ ನಡೆಸುತ್ತಿದ್ದರು.

ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿ ದಕ್ಷಿಣ ಮತ್ತು ಮಧ್ಯ ಏಶ್ಯ ವ್ಯವಹಾರಗಳ ಉಸ್ತುವಾರಿಯಾಗಿರುವ ಸಹಾಯಕ ಕಾರ್ಯದರ್ಶಿ ಆ್ಯಲಿಸ್ ವೆಲ್ಸ್ ಈ ಸಂಬಂಧ ರವಿವಾರ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News