ನನಗೆ ಅಶ್ವಿನ್ ಮೇಲೆ ಮತ್ಸರವಿಲ್ಲ

Update: 2020-05-06 08:19 GMT

ಹೊಸದಿಲ್ಲಿ, ಮೇ 5: ರವಿಚಂದ್ರನ್ ಅಶ್ವಿನ್ ಮೇಲೆ ನನಗೆ ಅಸೂಯೆ ಇಲ್ಲ. ಅವರು ದಂತಕತೆಯಾಗುವ ಹಾದಿಯಲ್ಲಿದ್ದಾರೆ ಎಂದು ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಮಂಗಳವಾರ ಹೇಳಿದ್ದಾರೆ.

ಹರ್ಭಜನ್ ಬದಲಿ ಆಟಗಾರನಾಗಿ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಅಶ್ವಿನ್ ಆಸ್ಟ್ರೇಲಿಯದ ನಥಾನ್ ಲಿಯೊನ್ ಜೊತೆಗೆ ವಿಶ್ವದ ಪ್ರಮುಖ ಆಫ್-ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ.

ಹರ್ಭಜನ್ 2016ರಲ್ಲಿ ಭಾರತದ ಪರ ಕೊನೆಯ ಪಂದ್ಯವನ್ನಾಡಿದ್ದರೂ ಇನ್ನಷ್ಟೇ ನಿವೃತ್ತಿಯಾಗಬೇಕಾಗಿದೆ. 2015ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದ 39ರ ಹರೆಯದ ಸಿಂಗ್ ಈತನಕ 103 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ.

2011ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಅಶ್ವಿನ್ 71 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ‘‘ನಾನು ಎಲ್ಲದಕ್ಕೂ ಅಸೂಯೆ ಪಡುತ್ತೇನೆ ಎಂದು ಸಾಕಷ್ಟು ಜನ ಹೇಳುತ್ತಾರೆ. ಅವರು ಏನು ಬಯಸುತ್ತಾರೋ, ಅದನ್ನು ಹೇಳಬಹುದು. ನೀವು ಪ್ರಸ್ತುತ ಆಡುತ್ತಿರುವ ಶ್ರೇಷ್ಠ ಆಫ್-ಸ್ಪಿನ್ನರ್ ಎಂದು ನಾನು ಹೇಳಬಲ್ಲೆ’’ ಎಂದು ಅಶ್ವಿನ್‌ರೊಂದಿಗೆ ಇನ್‌ಸ್ಟಾಗ್ರಾಮ್ ಲೈವ್ ಚಾಟ್‌ನಲ್ಲಿ ಹರ್ಭಜನ್ ಹೇಳಿದ್ದಾರೆ.

 ‘‘ಖಂಡಿತವಾಗಿಯೂ ನಾನು ನಥಾನ್ ಲಿಯೊನ್‌ರನ್ನು ಇಷ್ಟಪಡುತ್ತೇನೆ. ಆತ ಆಸ್ಟ್ರೇಲಿಯದ ಪರ ಆಡುತ್ತಿರುವ ಕಾರಣ ಆತನನ್ನು ಯಾವಾಗಲೂ ಅಲ್ಲಿಯೇ ಇರಿಸುತ್ತೇನೆ. ನೀವು ಓರ್ವ ದಂತಕತೆಯಾಗುವ ತಯಾರಿಯಲ್ಲಿದ್ದೀರಿ. ನಾನು ನಿಮಗೆ ಶುಭ ಕೋರುವೆ. ನಿಮಗೆ ಇನ್ನಷ್ಟು,ಮತ್ತಷ್ಟು ವಿಕೆಟ್‌ಗಳು ಸಿಗುವಂತಾಗಲಿ’’ಎಂದು ಹರ್ಭಜನ್ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News