ಕೊರೋನ ಹಾವಳಿ ಜತೆಗೆ ಅಮೆರಿಕಾಗೆ ‘ಮರ್ಡರ್ ಹಾರ್ನೆಟ್ಸ್’ ಆತಂಕ !
ನ್ಯೂಯಾರ್ಕ್ : ವ್ಯಾಪಕ ಕೊರೋನವೈರಸ್ ಸೋಂಕಿನಿಂದ ಈಗಾಗಲೇ ಕಂಗಾಲಾಗಿರುವ ಅಮೆರಿಕಾಗೆ ಈಗ ಇನ್ನೊಂದು ಹೊಸ ಸಮಸ್ಯೆ ಎದುರಾಗಿದೆ. ‘ಮರ್ಡರ್ ಹಾರ್ನೆಟ್ಸ್’ ಎಂಬ ಹೆಸರಿನ ಕೀಟವೇ ಈಗ ಅಮೆರಿಕಾಗಿ ತಲೆನೋವಾಗಿ ಬಿಟ್ಟಿದೆ.
ಕೆನಡಾ ಗಡಿ ಸಮೀಪ ವಾಷಿಂಗ್ಟನ್ ರಾಜ್ಯದಲ್ಲಿ ಈ ಕೀಟಗಳ ಹಿಂಡು ಕಂಡು ಬಂದಿದ್ದು, ಇವುಗಳು ಮನುಷ್ಯರಿಗೆ ಹಾನಿಯುಂಟು ಮಾಡುವ ಜತೆಗೆ ಜೇನು ಉದ್ಯಮಕ್ಕೂ ಹೊಡೆತ ನೀಡಬಹುದೆಂಬ ಭಯವಿದೆ.
ಮನುಷ್ಯರಿಗೆ ಭಯಂಕರವಾಗಿ ಕಚ್ಚುವ ಈ ವೆಸ್ಪಾ ಮಂಡರಿನಿಯಾ ಕೀಟ 2.5 ಇಂಚು ಉದ್ದ ತನಕ ಬೆಳೆಯುತ್ತದೆ. ಸಾಮಾನ್ಯವಾಗಿ ಆಗ್ನೇಯ ಏಷ್ಯಾ, ಚೀನಾ ಮತ್ತು ತೈವಾನ್‍ನಲ್ಲಿ ಕಂಡು ಬರುವ ಈ ಕೀಟ ಮೊದಲ ಬಾರಿ ವಾಷಿಂಗ್ಟನ್ ಸಮೀಪದ ಬ್ಲೇಯ್ನ್ ಎಂಬಲ್ಲಿ ಡಿಸೆಂಬರ್ ತಿಂಗಳಲ್ಲಿ ಕಾಣಿಸಿಕೊಂಡಿತ್ತು.
ಈ ಕೀಟವು ಮನುಷ್ಯರಿಗೆ ಕಚ್ಚುತ್ತದೆ ಮತ್ತು ಅದು ಸಾಕಷ್ಟು ವಿಷಕಾರಿಯಾಗಿದೆ. ಅದು ಕಚ್ಚಿದ ಗಾಯದ ಸುತ್ತಮುತ್ತಲಿನ ಜಾಗದಲ್ಲಿ ಚರ್ಮ ಕರಗಿ ಹೋದಂತಾಗುತ್ತದೆ. ಈ ಕೀಟಗಳು ಜೇನುನೊಣಗಳನ್ನೂ ದೊಡ್ಡ ಸಂಖ್ಯೆಯಲ್ಲಿ ಸಾಯಿಸುವ ಸಾಮರ್ಥ್ಯ ಹೊಂದಿವೆಯಲ್ಲದೆ ನಂತರ ಇವುಗಳು ಜೇನುಗೂಡನ್ನು ತಮ್ಮದೇ ಎಂದು ತಿಳಿದುಕೊಂಡು ಈ ಜೇನುಗೂಡಿನಲ್ಲಿ ತಮ್ಮ ಮರಿಗಳಿಗೆ ಆಹಾರ ನೀಡುತ್ತವೆ ಎಂದು ವಾಷಿಂಗ್ಟನ್ ಕೃಷಿ ಇಲಾಖೆಯ ವೆಬ್‍ಸೈಟ್‍ನಲ್ಲಿ ಮಾಹಿತಿ ನೀಡಲಾಗಿದೆ. ಕೆಲವೇ ಕೆಲವು ಮರ್ಡರ್ ಹಾರ್ನೆಟ್ಸ್ ಒಂದು ಜೇನುಗೂಡನ್ನು ಕೆಲವೇ ಗಂಟೆಗಳಲ್ಲಿ ನಾಶ ಮಾಡಬಲ್ಲವು.
ಸದ್ಯ ಅಮೆರಿಕಾದ ವಿಜ್ಞಾನಿಗಳು ಈ ಕೀಟಗಳ ಹಿಂದೆ ಬಿದ್ದಿದ್ದಾರೆ. ಇವುಗಳ ಕಡಿತ ಕೆಲವೊಮ್ಮೆ ಮಾರಣಾಂತಿಕವಾಗಬಹುದಾಗಿದ್ದು, ವರ್ಷವೊಂದರಲ್ಲಿ ಕನಿಷ್ಠ 50 ಮಂದಿ ಈ ಕೀಟದ ಕಡಿತಕ್ಕೆ ಸಾಯುತ್ತಾರೆ ಎಂದು ಒಂದು ಅಧ್ಯಯನ ತಿಳಿಸಿದೆ. ಸಾಮಾನ್ಯವಾಗಿ ಈ ಜಾತಿಯ ಕೀಟ ಮನುಷ್ಯರಿಗೆ ಹಾಗೂ ಇತರ ಪ್ರಾಣಿಗಳಿಗೆ ಕಚ್ಚುವುದಿಲ್ಲವಾದರೂ ತಮಗೆ ಅಪಾಯವಿದೆ ಎಂದು ಅರಿತಾಕ್ಷಣ ಅವುಗಳು ಕಚ್ಚುತ್ತವೆ.