×
Ad

ಪೌಷ್ಠಿಕ ಆಹಾರ ವಿತರಣೆಯಲ್ಲಿ ಕಡಿತ ಬೇಡ: ಮುಖ್ಯಮಂತ್ರಿಗೆ ಕೊರಗ ಸಮುದಾಯದ ಮನವಿ

Update: 2020-05-06 13:56 IST

ಮಂಗಳೂರು, ಮೇ 6: ದ.ಕ. ಜಿಲ್ಲೆಯ ಮೂಲನಿವಾಸಿಗಳಾಗಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಕೊರಗರು ಹಾಗೂ ಮಲೆಕುಡಿಯ ಕುಟುಂಬಗಳಿಗೆ ವರ್ಷದ ಆರು ತಿಂಗಳು ನೀಡಲಾಗುವ ಪೌಷ್ಠಿಕ ಆಹಾರದಲ್ಲಿ ಕಡಿತಗೊಳಿಸದಂತೆ ಒತ್ತಾಯಿಸಿ ಕೊರಗ ಸಮುದಾಯದ ಪ್ರತಿನಿಧಿಗಳಿಂದ ಇಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ನಗರದ ಕೊಟ್ಟಾರ ಬಳಿಯ ಐಟಿಡಿಪಿ (ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ) ಕಚೇರಿ ಎದುರು ಸುಮಾರು 10 ಮಂದಿಯಷ್ಟಿದ್ದ ಕೊರಗ ಪ್ರತಿನಿಧಿಗಳು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಐಟಿಪಿಡಿ ಪ್ರಭಾರ ಅಧಿಕಾರಿಯೂ ಆಗಿರುವ ಯೋಗೀಶ್ ಅವರಿಗೆ ಮನವಿ ಸಲ್ಲಿಸಿದರು.

ಕೊರೋನ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಿಯಮಗಳನ್ನು ಪಾಲಿಸಿದ ಕೊರಗ ಪ್ರತಿನಿಧಿಗಳು ಕಚೇರಿ ಹೊರಗಡೆ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಧರಿಸಿದ್ದಲ್ಲದೆ, ಮನವಿ ನೀಡುವ ಮುನ್ನ ಸಮುದಾಯದ ಮುಖಂಡರಾದ ಸುಂದರ ಅವರು ಕೈಗಳಿಗೆ ಸ್ಯಾನಿಟೈಸರ್ ಹಾಕಿಕೊಂಡು ಮನವಿ ಪತ್ರವನ್ನು ಅಧಿಕಾರಿಗೆ ಹಸ್ತಾಂತರಿಸಿದರು.

‘‘ಕೊರಗ ಸಮುದಾಯದ ಜನರಲ್ಲಿ ಪೌಷ್ಠಿಕ ಆಹಾರದ ಕೊರತೆಯನ್ನು ಮನಗಂಡು 2008ರಿಂದ ಆಹಾರ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಕಳೆದ ವರ್ಷ (2019-20)ನೆ ಸಾಲಿನಲ್ಲಿ ದ.ಕ. ಜಿಲ್ಲೆಯಲ್ಲಿ ಪೌಷ್ಠಿಕ ಆಹಾರವನ್ನು 45 ದಿನಗಳಿಗೆ ಒಂದು ಅವಧಿಯಂತೆ ನಾಲ್ಕು ಅವಧಿಗಳಿಗೆ ಮಾತ್ರವೇ ವಿತರಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ, ಕೂಲಿ ಇಲ್ಲದೆ ಸಮುದಾಯದ ಎಲ್ಲಾ ಕುಟುಂಬಗಳು ತೊಂದರೆಗೀಡಾಗಿವೆ. 2019-20ನೆ ಸಾಲಿನಲ್ಲಿ ಬಾಕಿ ಉಳಿದ ಎರಡು ಅವಧಿಯ ಆಹಾರವನ್ನು ಬಿಡುಗಡೆಗೊಳಿಸಬೇಕು. ಮಾತ್ರವಲ್ಲದೆ ಈ ವರ್ಷವೂ ಹಿಂದಿನಂತೆಯೇ ಆರು ತಿಂಗಳ ಕಾಲ ಆಹಾರವನ್ನು ಸಮರ್ಪಕವಾಗಿ ವಿತರಿಸಬೇಕು ಎಂಬುದು ನಮ್ಮ ಮನವಿ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಮಾಡಾಗಿದೆ’’ ಎಂದು ಸುಂದರ ತಿಳಿಸಿದರು.

ಮನವಿ ಸ್ವೀಕರಿಸಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಯೋಗೀಶ್‌ರವರು, ಮನವಿಯ ಕುರಿತಂತೆ ಸಂಬಂಧಪಟ್ಟವರಿಗೆ ಮನವರಿಕೆ ಮಾಡಿ ಆಹಾರ ಸಾಮಗ್ರಿ ಬಿಡುಗಡೆಗೆ ಪ್ರಯತ್ನಿಸುವುದಾಗಿ ಮನವಿ ಸಲ್ಲಿಸಿದ ಪ್ರತಿನಿಧಿಗಳಿಗೆ ಭರವಸೆ ನೀಡಿದರು.

‘‘ದ.ಕ. ಜಿಲ್ಲೆಯಲ್ಲಿ ಕೊರಗ ಸಮುದಾಯದ 1124 ಹಾಗೂ ಮಲೆಕುಡಿಯ ಸಮುದಾಯದ 1711 ಕುಟುಂಬಗಳು ಸೇರಿ ಒಟ್ಟು 2935 ಕುಟುಂಬಗಳಿಗೆ ಪೌಷ್ಠಿಕ ಆಹಾರವನ್ನು ವಿತರಿಸಲಾಗುತ್ತಿದೆ. ಈ ಹಿಂದೆ ವರ್ಷದ ಆರು ತಿಂಗಳು ಪೂರೈಕೆಯಾಗುತ್ತಿದ್ದ ಆಹಾರ ಕಳೆದ ವರ್ಷಕ್ಕೆ 45 ದಿನಗಳಿಗೊಮ್ಮೆ 4 ಅವಧಿಗೆ ಪೂರೈಕೆಗೆ ಸರಕಾರದಿಂದ ನಿರ್ದೇಶನವಾಗಿದೆ. ಕೊರಗ ಹಾಗೂ ಮಲೆಕುಡಿಯ ಸಮುದಾಯದಿಂದ ಇದನ್ನು ಆರು ಅವಧಿಗೂ ನೀಡಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತರಲಾಗುವುದು’’ ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News