ವಲಸೆ ಕಾರ್ಮಿಕರು ಬಿಲ್ಡರ್ ಗಳ ಜೀತದಾಳುಗಳಲ್ಲ : ಡಿವೈಎಫ್ಐ

Update: 2020-05-06 10:58 GMT
ಮುನೀರ್ ಕಾಟಿಪಳ್ಳ

ಮಂಗಳೂರು : ಉತ್ತರ ಭಾರತದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ನಿಯೋಜಿಸಲಾಗಿದ್ದ ವಿಶೇಷ ರೈಲುಗಳನ್ನು ಬಿಲ್ಡರ್, ರಿಯಲ್ ಎಸ್ಟೇಟ್ ಡೆವಲಪರ್ ಗಳ ಪ್ರತಿನಿಧಿಗಳ ಜೊತೆಗಿನ ಸಭೆಯ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ರದ್ದುಗೊಳಿಸಿರುವುದನ್ನು ಡಿವೈಎಫ್ಐ ಬಲವಾಗಿ ಖಂಡಿಸಿದೆ.‌ ತಾವು ಊರಿಗೆ ಹೋಗಬೇಕೊ, ಇಲ್ಲೆ ಉಳಿಯಬೇಕೊ ಎಂದು ನಿರ್ಧರಿಸಬೇಕಾಗಿರುವುದು ವಲಸೆ ಕಾರ್ಮಿಕರೇ ಹೊರತು ಬಿಲ್ಡರ್, ರಿಯಲ್ ಎಸ್ಟೇಟ್ ಲಾಬಿ ಅಲ್ಲ. ಲಾಬಿಗಳ ಒತ್ತಡಕ್ಕೆ ಮಣಿದು ಪ್ರಯಾಣಿಸದಂತೆ ಬಲವಂತವಾಗಿ ತಡೆಯಲು ವಲಸೆ ಕಾರ್ಮಿಕರು ಬಿಲ್ಡರ್, ಡೆವಲಪರ್ ಮಾಫಿಯಾಗಳ ಜೀತದಾಳುಗಳಲ್ಲ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಯಡಿಯೂರಪ್ಪ ಸರಕಾರದ ನಡೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಕ್ ಡೌನ್ ಆರಂಭದ ದಿನಗಳಲ್ಲಿ ವಲಸೆ ಕಾರ್ಮಿಕರು ಹಸಿವಿನಿಂದ ಕಂಗೆಟ್ಟಾಗ ಬಿಲ್ಡರ್, ರಿಯಲ್ ಎಸ್ಟೇಟ್ , ಗುತ್ತಿಗೆದಾರರು ನೆರವಿಗೆ ಬರಲಿಲ್ಲ‌ ಅವರನ್ನು ಹಸಿವಿನಿಂದ ಬೇಯಲು ಬಿಟ್ಟು ಹಾಯಾಗಿದ್ದರು. ಸರಕಾರವೂ ಇಂತಹ ಲಾಬಿಗಳ ಪ್ರತಿನಿಧಿಗಳ ಸಭೆ ಕರೆದು ಕನಿಷ್ಟ ಆಹಾರ, ದಿನಸಿಯ ಜವಾಬ್ದಾರಿ ಹೊರುವಂತೆ ನಿರ್ದೇಶನ ನೀಡಲಿಲ್ಲ‌. ಬಹುತೇಕ ದಾ‌ನಿಗಳ ನೆರವಿನಿಂದಲೇ ವಲಸೆ ಕಾರ್ಮಿಕರು ಬದುಕುಳಿದರು.‌ ಇದೀಗ ಲಾಕ್ ಡೌನ್ ಸಡಿಲಗೊಂಡು ಉತ್ತರ ಭಾರತದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವ ಸಂದರ್ಭದಲ್ಲಿ ಸರಕಾರ ಬಿಲ್ಡರ್, ಗುತ್ತಿಗೆದಾರರ ಲಾಬಿಗಳಿಗೆ ಮಣಿದು ಪ್ರಯಾಣ ರದ್ದುಗೊಳಿಸಿರುವುದು, ಬಲವಂತವಾಗಿ ದುಡಿಸಿಕೊಳ್ಳಲು ಹೊರಟಿರುವುದು ಕಾರ್ಮಿಕ ಕಾಯ್ದೆಗಳ, ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ‌. ಇದನ್ನು ಯಾವ ಕಾರಣಕ್ಕೂ ಒಪ್ಪಲಾಗದು.‌ ಬೆಂಗಳೂರು, ಮಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿರುವ ವಲಸೆ ಕಾರ್ಮಿಕರಿಗೆ ದುಡಿಮೆಯ ಸಂದರ್ಭದಲ್ಲೂ ಯಾವ ನಿಯಮ ಬದ್ಧ ಸವಲತ್ತುಗಳನ್ನೂ ಅವರ ಶ್ರಮವನ್ನು ಬಳಸುವ ಮಾಲಕರು ನೀಡುತ್ತಿರಲಿಲ್ಲ.‌ ಕಾರ್ಮಿಕ ಇಲಾಖೆಯೂ ಅವರನ್ನು ಆಧುನಿಕ ಜೀತಗಾರರಂತೆಯೆ ಭಾವಿಸಿತ್ತು. ಪಿಎಫ್, ಇ ಎಸ್ ಐ ಸಹಿತ ನಿಯಮ ಬದ್ಧ ಸವಲತ್ತುಗಳನ್ನು ವ್ಯವಸ್ಥಿತವಾಗಿ ಧ್ವನಿ ಇಲ್ಲದ ಅವರಿಂದ ವಂಚಿಸಲಾಗಿತ್ತು. ಅವರ ಶ್ರಮವನ್ನು ಅಗ್ಗಕ್ಕೆ ಖರೀದಿಸಿ ಕೋಟ್ಯಾಂತರ ರೂಪಾಯಿ ಲಾಭಗಳಿಸಲಾಯಿತು. ಆ ರೀತಿ ಲಾಭಗಳಿಸಿದ ಶಕ್ತಿಗಳೆ ಲಾಕ್ ಡೌನ್ ಸಂದರ್ಭ ಅವರನ್ನು ಹಸಿವಿಗೆ ದೂಡಿ ಬೀದಿ ಪಾಲು ಮಾಡಿದ್ದರು. ಇಂತಹ ಬಹಿರಂಗ ಗುಲಾಮಗಿರಿಗೆ ಕಾರ್ಮಿಕ ಇಲಾಖೆ, ಸರಕಾರದ ಆಯ ಕಟ್ಟಿನ ಸ್ಥಾನಗಳಲ್ಲಿ ಇರುವ ಕೆಲವು ಜನಗಳ ಬೆಂಬಲ ಇತ್ತು.

ಈಗ ಕೊರೋನ ಭೀತಿ ಕಣ್ಣೆದುರಿಗಿರುವಾಗ ಅಪಾರ ಸಂಕಷ್ಟಕ್ಕೊಳಗಾಗಿರುವ, ನಿರ್ಲಕ್ಷ್ಯ, ತಾರತಮ್ಯ, ಶೋಷಣೆಯಿಂದ ಕಂಗೆಟ್ಟಿರುವ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿ, ಕುಟುಂಬವನ್ನು ಸೇರಲು ಬಯಸುವುದು ಸಹಜ. ಇಂತಹ ಸಂದರ್ಭ ಕೇವಲ ಲಾಭವನ್ನೇ ಗುರಿಯಾಗಿಟ್ಟು ಕೊಂಡಿರುವ ಬಿಲ್ಡರ್, ರಿಯಲ್ ಎಸ್ಟೇಟ್, ಗುತ್ತಿಗೆದಾರರ ಲಾಬಿಗಳು ಅವರನ್ನು ಬಲವಂತವಾಗಿ ಉಳಿಸಿಕೊಳ್ಳಲು ಯತ್ನಿಸುತ್ತಿವೆ. ಅಂತಹ  ಲಾಬಿಗೆ ಮುಖ್ಯಮಂತ್ರಿ ಯಡಿಯೂರಪ್ಪ  ತಲೆ ಬಾಗಿರುವುದು ಅಕ್ಷಮ್ಯ.  ಪ್ರಜಾಪ್ರಭುತ್ವದ ಆಶಯಗಳ ನಿರ್ಲಜ್ಜ ಉಲ್ಲಂಘನೆ, ಇದು ಆಧುನಿಕ ಜೀತಗಾರಿಕೆಗೆ ಸರಕಾರವೇ ಬೆಂಬಲ ನೀಡಿದಂತೆ. ಕರ್ನಾಟಕದ ಮತದಾರರಲ್ಲ ಎಂಬ ಕಾರಣಕ್ಕೆ ಈ ಮಟ್ಟಿಗಿನ ಕ್ರೌರ್ಯ ಮೆರೆಯುತ್ತಿರುವಾಗಲೂ ಇಲ್ಲಿನ ರಾಜಕೀಯ, ಸಾಮಾಜಿಕ ವಲಯ ನಿರ್ಲಿಪ್ತವಾಗಿರುವುದು ವಿಷಾದದ ಸಂಗತಿ. ಈಗಾಗಲೆ ಬೆಂಗಳೂರು, ಮಂಗಳೂರಿನ ಬೀದಿಗಳಲ್ಲಿ ವಲಸೆ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಹತಾಷೆಯಿಂದ ಅಡ್ಡಾಡುತ್ತಿದ್ದು, ಅಕ್ರೋಶದ ಕಟ್ಟೆಯೊಡೆದರೆ ಅನಾಹುತಗಳಿಗೆ ಕಾರಣವಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ತಕ್ಷಣ ತಮ್ಮ ನಿಲುವು ಬದಲಾಯಿಸಿ ಊರುಗಳಿಗೆ ತೆರಳ ಬಯಸುವ ಕಾರ್ಮಿಕರಿಗೆ ಗೌರವಯುತ ಏರ್ಪಾಡುಗಳನ್ನು ಮಾಡಬೇಕು ಎಂದು ಡಿವೈಎಫ್ಐ ಒತ್ತಾಯಿಸುತ್ತದೆ ಎಂದು ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News