ವಲಸೆ ಕಾರ್ಮಿಕರ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ: ಸಂಸದ ನಳಿನ್ ಆರೋಪ
ಮಂಗಳೂರು, ಮೇ 6: ವಲಸೆ ಕಾರ್ಮಿಕರ ವಿಚಾರದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ರಾಜಕಾರಣ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದ ಅವರು, ಕೋವಿಡ್‌ನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಈಗ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದರು. ಲಾಕ್‌ಡೌನ್‌ನ 40 ದಿನಗಳ ಅವಧಿಯಲ್ಲಿ ಕಾಂಗ್ರೆಸ್ ಮೌನ ವಹಿಸಿತ್ತು. ಕಾರ್ಮಿಕ ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಊಟೋಪಚಾರ ಹಾಗೂ ಅವರನ್ನು ಸ್ವಗ್ರಾಮಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದರು. ಕೇಂದ್ರ ಹಾಗೂ ರಾಜ್ಯದ ಕೋವಿಡ್ ಪರಿಹಾರ ನಿಧಿಗೆ ನಿಧಿ ಸಂಗ್ರಹಿಸುವ ಕೆಲಸ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ಗೆ ಆಗ ಯಾಕೆ ಇದೆಲ್ಲ ನೆನಪಾಗಿಲ್ಲ. ಈಗ ವಲಸೆ ಕಾರ್ಮಿಕರ ಬಗ್ಗೆ ಕಾಳಜಿ ತೋರಿಸುವ ಅಗತ್ಯ ಕಾಂಗ್ರೆಸ್‌ಗೆ ಇಲ್ಲ. ರಾಜ್ಯ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ. ಹಾಗಾಗಿಯೇ ಕಾರ್ಮಿಕರನ್ನು ಉಚಿತವಾಗಿ ಬಸ್‌ಗಳಲ್ಲಿ ಅವರ ಊರುಗಳಿಗೆ ಕಳುಹಿಸಿಕೊಡುತ್ತಿದೆ. ಆದ್ದರಿಂದ ಕೆಪಿಸಿಸಿ ನೀಡಲು ಮುಂದಾದ ಚೆಕ್‌ನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ವೀಕರಿಸಿಲ್ಲ ಎಂದು ನಳಿನ್ ಕುಮಾರ್ ಹೇಳಿದರು.
ಕಾರ್ಮಿಕರ ಬಗ್ಗೆ ಅನುಕಂಪ ವ್ಯಕ್ತಪಡಿಸುವ ಕಾಂಗ್ರೆಸಿಗರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಯಾಕೆ ಪರಿಹಾರ ನೀಡಿಲ್ಲ ಎಂದು ನಳಿನ್ ಕುಮಾರ್ ಪ್ರಶ್ನಿಸಿದರು. ಜಾತಿ, ಮತ, ಪಂಥ, ರಾಜಕಾರಣ ಬಿಟ್ಟು ಕೆಲಸ ಮಾಡಬೇಕು. ಇಂತಹ ಸಂದರ್ಭಗಳಲ್ಲಿ ಜನತೆಯ ಜೊತೆಗೆ ಇರುವಂತೆ ಅವರು ಕಾಂಗ್ರೆಸ್ ನಾಯಕರನ್ನು ವಿನಂತಿಸಿದರು.
ಗೋಷ್ಠಿಯಲ್ಲ್ಲಿ ಬಿಜೆಪಿ ಪ್ರಮುಖರಾದ ರವಿಶಂಕರ ಮಿಜಾರ್, ಜಗದೀಶ ಶೇಣವ, ಜಿತೇಂದ್ರ ಕೊಟ್ಟಾರಿ, ಸುಧೀರ್ ಶೆಟ್ಟಿ ಕಣ್ಣೂರು, ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ಪರಿಶ್ರಮದಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿದೆ. ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿರುವ ಬಡವರ ಸಬಲೀಕರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 1,610 ಕೋಟಿ ರೂ.ಗಳ ಯೋಜನೆ ಪ್ರಕಟಿಸಿರುವುದು ಸಾಮಾಜಿಕ ಸುಧಾರಣೆಯ ಮಹಾಪರ್ವ ಎಂದು ಎಂದು ಸಂಸದ ಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಆರ್ಥಿಕ ಸಮಸ್ಯೆಯ ಸಂದರ್ಭದಲ್ಲೂ ಬಡವರು, ಅಸಂಘಟಿತ ಕಾರ್ಮಿಕರ ಬದುಕಿಗೆ ಆಧಾರವಾಗುವ ನೆಲೆಯಲ್ಲಿ ಅಭೂತಪೂರ್ವ ಸ್ಪಂದನೆ ಇದಾಗಿದ್ದು, ರಾಜ್ಯದ ಇತಿಹಾಸದಲ್ಲಿಯೇ ಇದು ಮೊದಲು ಎಂದರು.