×
Ad

ಯುರೋಪಿಗೆ 1,000 ಟನ್ ಪ್ಯಾರಾಸಿಟಮಲ್ ಕಚ್ಚಾ ಪದಾರ್ಥಗಳ ರವಾನೆಗೆ ಭಾರತ ಸಜ್ಜು

Update: 2020-05-06 19:53 IST

ಹೊಸದಿಲ್ಲಿ,ಮೇ 6: ಭಾರತವು ಸಾಮಾನ್ಯ ನೋವು ನಿವಾರಕವಾಗಿರುವ ಪ್ಯಾರಾಸಿಟಮಲ್ ತಯಾರಿಕೆಗೆ ಅಗತ್ಯವಾಗಿರುವ,ಸುಮಾರು 1,000 ಟನ್ ಸಕ್ರಿಯ ಔಷಧೀಯ ಘಟಕಾಂಶ (ಎಪಿಐ)ವನ್ನು ಯುರೋಪಿಗೆ ಪೂರೈಸಲಿದೆ ಎಂದು ಭಾರತೀಯ ಔಷಧಿ ರಫ್ತು ಉತ್ತೇಜನ ಮಂಡಳಿ (ಫಾರ್ಮೆಕ್ಸಿಲ್)ಯು ತಿಳಿಸಿದೆ.

ದೇಶದಲ್ಲಿ ಕೊರೋನ ವೈರಸ್ ಬಿಕ್ಕಟ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಸರಕಾರವು ಭಾರತೀಯರ ಹಿತಾಸಕ್ತಿಗಳನ್ನು ಪರಿಗಣಿಸಿ ಕಳೆದ ಮಾರ್ಚ್‌ನಲ್ಲಿ ಪ್ಯಾರಾಸಿಟಮಲ್ ಸೇರಿದಂತೆ ಹಲವಾರು ಔಷಧಿಗಳ ರಫ್ತನ್ನು ನಿಷೇಧಿಸಿತ್ತಾದರೂ ಈಗ ನಿರ್ಬಂಧಗಳನ್ನು ಸಡಿಲಿಸಲಾಗಿದೆ.

 ಪ್ರತಿ ತಿಂಗಳು ಸುಮಾರು 800 ಟನ್ ಎಪಿಐಗಳನ್ನು ಪೂರೈಸುವಂತೆ ಐರೋಪ್ಯ ಒಕ್ಕೂಟವು ಕೋರಿಕೊಂಡಿತ್ತು. ಕಳೆದ 10 ದಿನಗಳಿಂದ ಅದು ಭಾರತದ ಮೇಲೆ ತೀವ್ರ ಒತ್ತಡ ಹೇರುತ್ತಿದೆ ಎಂದು ಫಾರ್ಮೆಕ್ಸಿಲ್ ಅಧ್ಯಕ್ಷ ದಿನೇಶ ದುವಾ ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಸ್ಥಳೀಯ ಅಗತ್ಯಗಳಿಗಾಗಿ ನಾಲ್ಕು ತಿಂಗಳಿಗೆ ಸಾಲುವಷ್ಟು ಪ್ಯಾರಾಸಿಟಮಲ್ ದಾಸ್ತಾನು ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಔಷಧಿ ತಯಾರಿಕೆ ಕಂಪನಿಗಳಿಗೆ ಸೂಚಿಸಿದ್ದಾರೆ. ಭಾರತವು ಜೆನೆರಿಕ್ ಔಷಧಿಗಳ ವಿಶ್ವದ ಪ್ರಮುಖ ರಫ್ತು ರಾಷ್ಟ್ರವಾಗಿದೆ.

ಐರೋಪ್ಯ ಒಕ್ಕೂಟವು ಭಾರತದಿಂದ ಪ್ಯಾರಾಸಿಟಮಲ್ ಎಪಿಐಗಳ ಅತ್ಯಂತ ದೊಡ್ಡ ಖರೀದಿದಾರನಾಗಿದ್ದು,ವಾರ್ಷಿಕ 12,000 ಟನ್‌ಗಳಷ್ಟು ಆಮದು ಮಾಡಿಕೊಳ್ಳುತ್ತಿದೆ. ಪ್ಯಾರಾಸಿಟಮಲ್ ಅನ್ನು ಎಸಿಟಾಮಿನೊಫೆನ್ ಹೆಸರಿನಲ್ಲಿಯೂ ಮಾರಾಟ ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News