ಉಡುಪಿಯಿಂದ ತೆರಳಿದ ಯುವತಿಗೆ ಬಾದಾಮಿಯಲ್ಲಿ ಕೊರೋನ ಪಾಸಿಟಿವ್
ಉಡುಪಿ, ಮೇ 6: ಕಳೆದ ಮಾರ್ಚ್ ಎರಡನೇ ವಾರದಲ್ಲಿ ಉಡುಪಿ ಜಿಲ್ಲೆ ಯಿಂದ ತಮ್ಮ ಹುಟ್ಟೂರಾದ ಬಾಗಲಕೋಟೆ ಜಿಲ್ಲೆ ಬಾದಾಮಿಗೆ ತೆರಳಿದ 18ರ ಹರೆಯದ ಯುವತಿಯೊಬ್ಬರು ಇಂದು ಕೊರೋನ ಪಾಸಿಟಿನ್ ಆಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಕುರಿತು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರನ್ನು ಸಂಪರ್ಕಿಸಿದಾಗ, ಈ ಯುವತಿ ಮಾರ್ಚ್ ಎರಡನೇ ವಾರದಲ್ಲಿ ಉಡುಪಿಯಿಂದ ಅಲ್ಲಿಗೆ ತೆರಳಿರು ವುದಾಗಿ ಬಾಗಲಕೋಟೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರು ಮಾಹಿತಿ ನೀಡಿದ್ದು, ಹೀಗಾಗಿ ಆಕೆಯ ಕೊರೋನ ಪಾಸಿಟಿವ್‌ನಲ್ಲಿ ಉಡುಪಿಯ ಯಾವುದೇ ಸಂಪರ್ಕ ಹೊಂದಿರುವ ಸಾಧ್ಯತೆ ಇಲ್ಲ. ಆದುದರಿಂದ ಉಡುಪಿ ಜಿಲ್ಲೆಯ ಜನತೆ ಈ ಬಗ್ಗೆ ಯಾವುದೇ ರೀತಿ ಆತಂಕಕ್ಕೊಳಗಾಗಬೇಕಾಗಿಲ್ಲ ಎಂದು ಹೇಳಿದರು.
ಕಾರ್ಕಳ ತಾಲೂಕು ನಿಟ್ಟೆಯಲ್ಲಿ ಓದುತ್ತಿರುವ ಈ ಯುವತಿ ಕಾಲೇಜಿಗೆ ರಜೆ ನೀಡಿದ ಕಾರಣ ಮಾರ್ಚ್ 14ರಂದು ಬಾದಾಮಿಗೆ ತೆರಳಿದ್ದರು. ಅಲ್ಲಿ ಮೇ 2ರಂದು ಕೊರೋನ ಪಾಸಿಟಿವ್ ಬಂದ 23ರ ಹರೆಯದ ಗರ್ಭಿಣಿಯ ಸಂಪರ್ಕಕ್ಕೆ ಮೊದಲೇ ಬಂದಿದ್ದ ಈ ಯುವತಿ, ಇಂದು ಪಾಸಿಟಿವ್ ಆಗಿದ್ದಾರೆ. ಬಾದಾಮಿಯಲ್ಲಿ ಇಂದು ಕಂಡುಬಂದ ಒಟ್ಟು 13 ಪಾಸಿಟಿವ್ ಪ್ರಕರಣಗಳಲ್ಲಿ 12 ಮಂದಿ ಈ ಗರ್ಭಿಣಿಯ ಸಂಪರ್ಕಕ್ಕೆ ಬಂದವರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದರು.
ಈಕೆ ಲಾಕ್‌ಡೌನ್‌ಗಿಂತ ಮೊದಲೇ ಉಡುಪಿಯಿಂದ ತೆರಳಿರುವುದರಿಂದ ಹಾಗೂ ಆಕೆಗೆ ಬಾದಾಮಿಯಲ್ಲೇ ತಮ್ಮ ಪಕ್ಕದ ಮನೆಯ ಯುವತಿಯ ಸಂಪರ್ಕದಿಂದ ಸೋಂಕು ಬಂದಿರುವ ಹಿನ್ನೆಲೆಯಲ್ಲಿ ಇದರಲ್ಲಿ ಉಡುಪಿಯ ಯಾವುದೇ ಪಾತ್ರವಿಲ್ಲ ಎಂದವರು ಹೇಳಿದರು.