ಕೊರೋನ ವೈರಸ್: ದ.ಕ. ಜಿಲ್ಲೆಯಲ್ಲಿ 85 ವರದಿ ನೆಗೆಟಿವ್; 3 ಪಾಸಿಟಿವ್
ಮಂಗಳೂರು, ಮೇ 6: ಕೊರೋನ ವೈರಸ್ ರೋಗಕ್ಕೆ ಸಂಬಂಧಿಸಿ ಬುಧವಾರ ಪ್ರಯೋಗಾಲಯದಿಂದ ಸ್ವೀಕರಿಸಲಾದ ವರದಿಗಳ ಪೈಕಿ 85 ನೆಗೆಟಿವ್ ಮತ್ತು 3 ಪಾಸಿಟಿವ್ ಬಂದಿದೆ. ಇನ್ನೂ 217 ಮಂದಿಯ ವರದಿ ಬರಲು ಬಾಕಿ ಇದೆ.
ಬುಧವಾರ 79 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದ್ದು, ಇದರೊಂದಿಗೆ ಈವರೆಗೆ 40,303 ಮಂದಿಯ ಸ್ಕ್ರೀನಿಂಗ್ ಮಾಡಿದಂತಾಗಿದೆ. ಸಂಚಾರ ಕ್ಲಿನಿಕ್‌ನಲ್ಲಿ 50 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ.ಅಲ್ಲದೆ 137 ಮಂದಿಯ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜ್ವರ ಕ್ಲಿನಿಕ್‌ಗಳಲ್ಲಿ ಈವರೆಗೆ 2518 ಮಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಎನ್‌ಐಟಿಕೆಯಲ್ಲಿ 28 ಮತ್ತು ಇಎಸ್‌ಐ ಆಸ್ಪತ್ರೆಯಲ್ಲಿ 40 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಉಳಿದಂತೆ 27 ಮಂದಿಯ ಮೇಲೆ ವಿಶೇಷ ನಿಗಾ ಇಡಲಾಗಿದೆ.
ಈವರೆಗೆ 3,916 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಪೈಕಿ 3,699 ಮಂದಿಯ ವರದಿಯನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 3671 ಮಂದಿಯ ವರದಿಯು ನೆಗೆಟಿವ್ ಮತ್ತು 28 ಮಂದಿಯ ವರದಿಯು ಪಾಸಿಟಿವ್ ಬಂದಿದೆ. ಪಾಸಿಟಿವ್ ಪೈಕಿ 22 ದ.ಕ.ಜಿಲ್ಲೆಯ ನಿವಾಸಿಗಳು, ಕೇರಳದ 4, ಉಡುಪಿಯ 1 ಮತ್ತು ಭಟ್ಕಳದ 1 ಪ್ರಕರಣ ಸೇರಿವೆ. ಅಲ್ಲದೆ ಪಾಸಿಟಿವ್‌ಗಳ ಪೈಕಿ 13 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಈಗಾಗಲೆ ಬಿಡುಗಡೆಗೊಂಡಿದ್ದರೆ, 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಪೈಕಿ 7 ಮಂದಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. ಶಕ್ತಿನಗರದ 80 ವರ್ಷದ ವೃದ್ದೆಯು ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಬೋಳೂರಿನ 58 ವರ್ಷ ಪ್ರಾಯದ ಮಹಿಳೆಯು ಮೆದುಳಿನ ಸೋಂಕು ಮತ್ತು ಕ್ಷಯರೋಗದಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎ.19ರಂದು ಮಹಿಳೆ ಮತ್ತು ಎ.24 ಹಾಗೂ ಎ.30ರಂದು ಇಬ್ಬರು ವೃದ್ಧೆಯರು ಮೃತಪಟ್ಟಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆ
ಉಪ್ಪಿನಂಗಡಿಯ 39ರ ಹರೆಯದ ವ್ಯಕ್ತಿಗೆ ಎ.17ರಂದು ಕೊರೋನ ಸೋಂಕು ದೃಢಪಟ್ಟಿತ್ತು. ಆ ಬಳಿಕ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಗುಣಮುಖರಾಗಿದ್ದು, ಬುಧವಾರ ಅವರನ್ನು ಡಿಸ್‌ಜಾರ್ಜ್ ಮಾಡಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸೀಲ್‌ಡೌನ್ ಮುಂದುವರಿಕೆ
ಬಂಟ್ವಾಳದ ಕಸಬಾ ಮತ್ತು ಬೋಳೂರಿನಲ್ಲಿ ಕೊರೋನ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಎರಡೂ ಪ್ರದೇಶಗಳಲ್ಲಿ ಸೀಲ್‌ಡೌನ್‌ನ್ನು ಮುಂದುವರಿಸಲಾಗಿದೆ. ಬಂಟ್ವಾಳ ಸೀಲ್‌ಡೌನ್ ಪ್ರದೇಶಕ್ಕೆ ಬಂಟ್ವಾಳ ತಾಲೂಕು ತಹಶೀಲ್ದಾರ್/ ಮ್ಯಾಜಿಸ್ಟ್ರೇಟ್‌ರನ್ನು ಹಾಗೂ ಬೋಳೂರು ಸೀಲ್‌ಡೌನ್ ಪ್ರದೇಶಕ್ಕೆ ಸ್ಮಾರ್ಟ್‌ಸಿಟಿಯ ಕಾರ್ಯಕಾರಿ ಅಭಿಯಂತರರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಕ ಮಾಡಲಾಗಿದೆ.
ಪರೀಕ್ಷೆ ಕ್ರಮಬದ್ಧವಾಗಿದೆ: ವೈದ್ಯಾಧಿಕಾರಿ
ವೆನ್ಲಾಕ್ ಜಿಲ್ಲಾ ಕೋವಿಡ್ ಆಸ್ಪತ್ರೆಯ ವೈರಾಲಜಿ ಲ್ಯಾಬ್ ಮೂರು ಶೆಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸರಬರಾಜಾದ ಪರೀಕ್ಷಾ ಕಿಟ್‌ಗಳು ಸಮರ್ಪಕವಾಗಿದ್ದು, ವರದಿಗಳು ಸರಿಯಾಗಿಯೇ ಬರುತ್ತಿವೆ. ಪರೀಕ್ಷಾ ಕಿಟ್‌ಗಳು ಸರಿ ಇಲ್ಲದ ಕಾರಣ ವರದಿ ಬರುತ್ತಿಲ್ಲ ಎಂಬುದು ಸತ್ಯಕ್ಕೆ ದೂರವಾದುದು ಎಂದು ವೆನ್ಲಾಕ್ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.
ವೈರಾಲಜಿ ಲ್ಯಾಬ್ ಪರೀಕ್ಷೆಗಳು ಐಸಿಎಂಆರ್ ಹಾಗೂ ರಾಜ್ಯ ಸರಕಾರದಿಂದ ಅನುಮೋದನೆಗೊಂಡಿರುತ್ತವೆ. ಎಲ್ಲಾ ಪಾಸಿಟಿವ್ ಪ್ರಕರಣಗಳ ಪರೀಕ್ಷಾ ವರದಿಗಳು ಐಸಿಎಂಆರ್‌ನಿಂದ ದೃಢೀಕರಿಸಲ್ಪಡುತ್ತವೆ. ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಗಂಟಲು ದ್ರವ ಮಾದರಿಗಳು ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಯ ವೈರಾಲಜಿ ಲ್ಯಾಬ್‌ಗೆ ಬರುತ್ತಿವೆ. ಕಳೆದ ಮೂರು ದಿನಗಳಲ್ಲಿ ಗಂಟಲು ದ್ರವ ಮಾದರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ವರದಿಗಳು ತಡವಾಗಿರುತ್ತದೆ. ಮೂರು ದಿನಗಳಲ್ಲಿ ಒಟ್ಟು 669 ಮಾದರಿಗಳ ಪರೀಕ್ಷೆಗಳು ಆಗಿ 669 ವರದಿಗಳನ್ನೂ ನೀಡಲಾಗಿದೆ ಎಂದವರು ತಿಳಿಸಿದ್ದಾರೆ.