×
Ad

ಮಂಗಳೂರು: ಮತ್ತೊಂದು ಕಾಡುಕೋಣ ಪ್ರತ್ಯಕ್ಷ!

Update: 2020-05-06 20:26 IST

ಮಂಗಳೂರು, ಮೇ 6: ಕೊರೋನ-ಲಾಕ್‌ಡೌನ್ ಮಧ್ಯೆ ಮಂಗಳವಾರವಷ್ಟೇ ಕಾಡುಕೋಣವೊಂದು ಕಾಡಿನಿಂದ ನಾಡಿಗೆ ಬಂದು ಸುದ್ದಿ ಮಾಡಿದ್ದರೆ, ತಡರಾತ್ರಿಯ ವೇಳೆ ಮತ್ತೊಂದು ಕಾಡುಕೋಣ ಕೂಡ ನಗರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

ಕಾಡಿನಿಂದ ದಾರಿತಪ್ಪಿ ನಗರಕ್ಕೆ ಬಂದ ಈ ಕಾಡುಕೋಣವನ್ನು ಮತ್ತೆ ಕಾಡಿಗೆ ಅಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗವು ಹರಸಾಹಸ ಪಡುತ್ತಿದ್ದಾರೆ. ಬುಧವಾರ ಸಂಜೆಯ ವೇಳೆಗೆ ಕೂಳೂರಿನಲ್ಲಿ ಫಲ್ಗುಣಿ ನದಿಯನ್ನು ದಾಟಿರುವ ಈ ಕೋಣವು ಪಣಂಬೂರು ಪರಿಸರದಲ್ಲಿ ಅಲೆ ದಾಡುತ್ತಿತ್ತು. ಅಲ್ಲಿಂದ ಮುಂದಕ್ಕೆ ಜೋಕಟ್ಟೆ ಮೂಲಕ ಬಜ್ಪೆ/ತೋಕೂರು ಭಾಗದಲ್ಲಿ ಕಾಡಿಗೆ ಅಟ್ಟುವ ಉದ್ದೇಶವನ್ನು ಅರಣ್ಯ ಇಲಾಖೆ ಹೊಂದಿದ್ದು, ಈ ನಿಟ್ಟಿನಲ್ಲಿ ರಾತ್ರಿಯವರೆಗೂ ಸಿಬ್ಬಂದಿ ವರ್ಗವು ಪ್ರಯತ್ನ ಮುಂದುವರಿಸಿದೆ.

ಹೊರವಲಯದ ಗುಡ್ಡಕಾಡು ಪ್ರದೇಶದಿಂದ ತಪ್ಪಿಸಿಕೊಂಡು ಬಂದಿದ್ದ ಕಾಡುಕೋಣವೊಂದು ಮಂಗಳವಾರ ಮುಂಜಾನೆ ಬೆಳ್ಳಂಬೆಳಗ್ಗೆ ಮಂಗಳೂರು ನಗರದಲ್ಲಿ ಪತ್ತೆಯಾಗಿತ್ತು. ಮಧ್ಯಾಹ್ನವರೆಗೆ ಕಾರ್ಯಚರಣೆ ನಡೆಸಿ ಕಾಡುಕೋಣವನ್ನು ಹಿಡಿಯುವಲ್ಲಿ ಯಶಸ್ವಿಯಾದರೂ, ಚಾರ್ಮಾಡಿಗೆ ಸಾಗಿಸಿ ಕಾಡಿಗೆ ಬಿಟ್ಟ ಅರ್ಧ ಗಂಟೆಯ ಬಳಿಕ ಮೃತಪಟ್ಟಿತ್ತು.

ನಗರದಲ್ಲಿ ಎರಡು ಕಾಡು ಕೋಣಗಳು ಬಂದಿರುವ ಕುರಿತು ವಿಡಿಯೋಗಳು ಮಂಗಳವಾರ ಹರಿದಾಡುತ್ತಿದ್ದರೂ, ಒಂದು ಮಾತ್ರ ಪತ್ತೆಯಾಗಿತ್ತು. ರಾತ್ರಿಯ ವೇಳೆ ಅಶೋಕನಗರ ಬಳಿ ಕಾಣಿಸಿಕೊಂಡು ಮತ್ತೆ ಮಾಯವಾಗಿತ್ತು. ಬುಧವಾರ ಬೆಳಗ್ಗೆ ಕೋಡಿಕಲ್ ಬಳಿಕ ಒಮ್ಮೆ ಪ್ರತ್ಯಕ್ಷವಾದ ಈ ಕಾಡುಕೋಣ ಅಲ್ಲಿಂದಲೂ ತಪ್ಪಿಸಿಕೊಂಡಿತ್ತು. ಇದರ ಪತ್ತೆಗಾಗಿ ಅರಣ್ಯ ಇಲಾಖೆ ತಂಡಗಳನ್ನು ರಚಿಸಿ ನಗರದ ವಿವಿಧಡೆ ಹುಡಕಾಟ ನಡೆಸಿತ್ತು. ಮಧ್ಯಾಹ್ನ 2 ಗಂಟೆಯ ವೇಳೆಗೆ ಕೂಳೂರು ರಾ.ಹೆ. ಸೇತುವೆ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ಕಾಣಸಿಕ್ಕಿದೆ. ಅಂದರೆ ಫಲ್ಗುಣಿ ನದಿಯಲ್ಲಿ ಕೂಳೂರು ಕಡೆಯಿಂದ ಪಣಂಬೂರು ಕಡೆಗೆ ಈಜುತ್ತಾ ದಾಟಿ ಹೋಗಿದೆ. ಆ ಬಳಿಕ ಸುಸ್ತಾಗಿ ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿದೆ. ರಾತ್ರಿ ವೇಳೆಯೂ ಅದರ ಮೇಲೆ ಕಣ್ಣಿಡಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಶ್ರೀಧರ್ ತಿಳಿಸಿದ್ದಾರೆ.

ದೂರು ದಾಖಲು: ನಗರಕ್ಕೆ ಬಂದಿರುವ ಎರಡು ಕಾಡು ಕೋಣಗಳ ಪೈಕಿ ಒಂದು ಕೋಣವನ್ನು ರಕ್ಷಿಸುವಲ್ಲಿ ಯಶಸ್ವಿಯಾದರೂ, ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಜೆರಾರ್ಡ್‌ ಟವರ್ಸ್‌ ಎಂಬುವರು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅರಣ್ಯ ಇಲಾಖೆಯ ಬೇಜವಾಬ್ದಾರಿಯಿಂದ ಕಾಡುಕೋಣ ಸಾವನ್ನಪ್ಪಿದೆ. ಅದನ್ನು ಸೆರೆಹಿಡಿಯಲು ಇಲಾಖೆ ಅವೈಜ್ಞಾನಿಕ ಮಾರ್ಗವನ್ನು ಅನುಸ ರಿಸಿತ್ತು. ಟ್ರಾಂಕ್ವಿಲೈಸರ್ ಡೋಸ್, ಮೈಮೇಲೆ ಇದ್ದ ಗಾಯಗಳು ಇಲಾಖೆಯ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಾಡುಕೋಣ ತನ್ನ ಗುಂಪಿನಿಂದ ಬೇರೆಯಾದ ಒತ್ತಡ ಮತ್ತು ಒಂಟಿಯಾಗಿದ್ದುದರಿಂದ ಬೆದರಿದ್ದು, ಅರ್ಧದಿನ ಓಡಾಟ ನಡೆಸಿ ಸುಸ್ತಾಗಿರುವು ದರಿಂದ ಹೃದಯಕ್ಕೆ ಆಮ್ಲಜನಕ ಪೂರೈಕೆ ಕಡಿಮೆಯಾಗಿ ಸಾವನ್ನಪ್ಪಿರಬಹುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ಹಿರಿಯ ವೈಜ್ಞಾನಿಕ ಅಧಿಕಾರಿ ವಿಕ್ರಮ್ ಅಭಿಪ್ರಾಯಪಟ್ಟಿದ್ದಾರೆ.

ವನ್ಯ ಜೀವಿಗಳಿಗೆ ಅವುಗಳ ದೇಹತೂಕದ ಆಧಾರದಲ್ಲಿ ಅರಿವಳಿಕೆ ಮದ್ದನ್ನು ನೀಡಲಾಗುತ್ತದೆ. ಈ ಕಾಡು ಕೋಣದ ಭಾರ ಸುಮಾರು 600-750 ಕೆ.ಜಿ.ಎಂದು ಅಂದಾಜಿಸಿ ಅದಕ್ಕೆ ತಕ್ಕಂತೆ ಅರಿವಳಿಕೆ ಮದ್ದನ್ನು ಚುಚ್ಚಲಾಗಿದೆ. ಅರೆವಳಿಕೆ ಮದ್ದು ಹೆಚ್ಚಾಗುವ ಮತ್ತು ಕಡಿಮೆಯಾಗುವ ಪ್ರಮೇಯ ಬರುವುದಿಲ್ಲ. ಕಡಿಮೆಯಾದರೆ ಪ್ರಾಣಿಗೆ ಅರೆವಳಿಕೆ ಆಗುವುದಿಲ್ಲ, ಹೆಚ್ಚಾದರೆ ಅದು ಸಹಜ ಸ್ಥಿತಿಗೆ ಬರಲು ತುಂಬಾ ಸಮಯವಾಗುತ್ತದೆ.

ಸಾಮಾನ್ಯವಾಗಿ ಮೃಗಾಲಯದಲ್ಲಿ ಪ್ರಾಣಿಗಳಿಗೆ ಅರಿವಳಿಕೆ ಮದ್ದುಚುಚ್ಚಿದ ನಂತರ ಚಿಕಿತ್ಸೆ ಮುಗಿಸಿ ಅವುಗಳು ಎಚ್ಚರವಾಗುವರೆಗೆ ಆರೈಕೆ ನೀಡಲಾಗುತ್ತದೆ. ಸಹಜ ಸ್ಥಿತಿಗೆ ಬಂದ ನಂತರ ಅವುಗಳನ್ನು, ಸುತ್ತಮುತ್ತ ಬಂದ್ ಇರುವ ವಾಹನದಲ್ಲಿರಿಸಿ ಸಾಗಿಸಲಾಗುತ್ತದೆ. ದಾರಿ ಮಧ್ಯೆ ಅವುಗಳ ಮೈಮೇಲೆ ನೀರನ್ನು ಸಿಂಪಡಿಸುತ್ತಾ, ಕುಡಿಯಲು ನೀರು ಕೊಡುತ್ತಾ ರಾತ್ರಿ ವೇಳೆ ಸಾಗಿಸುವುದು ರೂಢಿ. ಈ ಪ್ರಕರಣದಲ್ಲಿ ಅಂತಹ ಯಾವುದೇ ಕ್ರಮ ಪಾಲಿಸಿಲ್ಲ. ಪಾಲಿಸುವುದು ಕಷ್ಟ ಮತ್ತು ವ್ಯವಸ್ಥೆಯೂ ಇಲ್ಲ. ತುರ್ತಾಗಿ ಹಗಲು ವೇಳೆಯಲ್ಲೇ ಎರಡು ಗಂಟೆಗಳ ಲಾರಿ ಪ್ರಯಾಣ ಅಧಿಕಾರಿಗಳಿಗೆ ಅನಿವಾರ್ಯವಾಗಿತ್ತು. ಅರಿವಳಿಕೆ ನೀಡಿದ ನಂತರ ಸಾಗಾಟ ಆರಂಭಿಸುವ ವೇಳೇ ಉಸಿರಾಟ ಸರಿಯಾಗಿ ನಡೆಯುತ್ತಿತ್ತು ಎಂದು ವಿಕ್ರಮ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News