ಕೋವಿಡ್-19 ನಿರ್ವಹಣೆಯಲ್ಲಿ ಎನ್‌ಜಿಒ ಬಳಸದ ಜಿಲ್ಲಾಡಳಿತ: ಲೋಬೋ ಆರೋಪ
Update: 2020-05-06 20:29 IST
ಮಂಗಳೂರು, ಮೇ 6: ದ.ಕ.ಜಿಲ್ಲೆಯಲ್ಲಿ ಸಾಕಷ್ಟು ಸರಕಾರೇತರ ಸಂಸ್ಥೆಗಳು (ಎನ್‌ಜಿಒ) ಉತ್ತಮ ಕೆಲಸ ಮಾಡುತ್ತಿದೆ. ಆದರೆ ಕೋವಿಡ್ 19 ನಿರ್ವಹಣೆಯಲ್ಲಿ ಜಿಲ್ಲಾಡಳಿತವು ಎನ್‌ಜಿಒಗಳನ್ನು ಸರಿಯಾಗಿ ಬಳಸಿಲ್ಲ ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಅರೋಗ್ಯ ಹಾಗೂ ವಿಪತ್ತು ನಿರ್ವಹಣೆ ಮತ್ತಿತರ ಕ್ಷೇತ್ರದಲ್ಲಿ ಸಾಕಷ್ಟು ಪರಿಣಿತಿ ಹೊಂದಿರುವ ಹಲವಾರು ಸಂಸ್ಥೆಗಳಿವೆ. ಇಂತಹ ಸಂಸ್ಥೆಗಳಿಗೆ ಕೋವಿಡ್ 19 ನಿರ್ವಹಣೆಯಲ್ಲಿ ಅವಕಾಶ ನೀಡಿದಲ್ಲಿ ಜಿಲ್ಲಾಡಳಿತಕ್ಕೆ ಆನೆ ಬಲ ಬರುತ್ತಿತ್ತು. ಆದರೆ ಜಿಲ್ಲಾಡಳಿತವು ನಗರದ ಸೇವಾಂಜಲಿ ಟ್ರಸ್ಟ್‌ಗೆ ಮಾತ್ರ ಅವಕಾಶ ಕೊಟ್ಟು ಇನ್ನುಳಿದ ಎನ್‌ಜಿಒ ಸಂಸ್ಥೆಯನ್ನು ಕಡೆಗಣಿಸಲಾಗಿದೆ ಎಂದು ಲೋಬೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಡಳಿತವು ಇನ್ನಾದರು ಎಲ್ಲಾ ಎನ್‌ಜಿಒ ಸಂಸ್ಥೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಅದಕ್ಕಾಗಿ ತುರ್ತು ಸಭೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.