×
Ad

ಹೊರ ರಾಜ್ಯ ವಲಸೆ ಕಾರ್ಮಿಕರ ಸಮಸ್ಯೆ ಬಗೆಹರಿಸುವಲ್ಲಿ ದ.ಕ. ಜಿಲ್ಲಾಡಳಿತ ಸಂಪೂರ್ಣ ವಿಫಲ : ವಿನಯರಾಜ್

Update: 2020-05-06 20:31 IST

ಮಂಗಳೂರು, ಮೇ 6: ಹೊರ ರಾಜ್ಯ ವಲಸೆ ಕಾರ್ಮಿಕರ ಸಮಸ್ಯೆ ಬಗೆಹರಿಸುವಲ್ಲಿ ದ.ಕ. ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ಕೋ ಆರ್ಡಿನೇಟರ್ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಸಿ. ವಿನಯರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದ.ಕ.ಜಿಲ್ಲೆಯ ಮುಖ್ಯ ಆರ್ಥಿಕ ಚಟುವಟಿಕೆಯಲ್ಲಿ ಕಟ್ಟಡ ಕಾಮಗಾರಿ ಮತ್ತು ಹೊಟೇಲ್ ಉದ್ಯಮ ಮುಂಚೂಣಿಯಲ್ಲಿದ್ದು, ಈ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಶೇ.90 ಜನರು ಹೊರ ರಾಜ್ಯದವರಾಗಿದ್ದಾರೆ. ಕೊರೋನ ಲಾಕ್‌ಡೌನ್ ಘೋಷಣೆ ಮಾಡುವ ಮುಂಚೆಯೇ ಈ ಕಾರ್ಮಿಕ ವರ್ಗವನ್ನು ಅವರವರ ಊರಿಗೆ ಹೋಗಲು ಸರಕಾರ ಸಮಯಾವಕಾಶ ಕೊಡುತ್ತಿದ್ದಲ್ಲಿ ಅವರ ಖರ್ಚಿನಲ್ಲಿ ಅವರು ಹೋಗುತ್ತಿದ್ದರು. ಸರಕಾರ ಅದಕ್ಕೆ ಅವಕಾಶ ಕಲ್ಪಿಸದೆ ಏಕಾಏಕಿ ಲಾಕ್‌ಡೌನ್ ಮಾಡಿದ ಕಾರಣ ಸುಮಾರು 45 ದಿನಗಳಿಂದ ಯಾವುದೇ ಆದಾಯವಿಲ್ಲದೆ ದಿನಸಿ ವಸ್ತುಗಳನ್ನು ಖರೀದಿಸಲು ಕೂಡಾ ಹಣವಿಲ್ಲದೇ 3 ಹೊತ್ತಿನ ಊಟಕ್ಕೆ ಈ ಕಾರ್ಮಿಕ ವರ್ಗ ಪರದಾಡುವಂತಾಯಿತು ಎಂದು ವಿನಯರಾಜ್ ತಿಳಿಸಿದ್ದಾರೆ.

ಮೂರು ದಿನದ ಹಿಂದೆ ಜಿಲ್ಲಾಡಳಿತ ಹೊರ ರಾಜ್ಯಗಳಿಗೆ ಹೋಗುವ ಕಾರ್ಮಿಕರು ಆನ್‌ಲೈನ್ ನಲ್ಲಿ ಅರ್ಜಿ ಭರ್ತಿ ಮಾಡಿಕೊಡಬೇಕೆಂದು ಮಾಧ್ಯಮಗಳ ಮೂಲಕ ತಿಳುವಳಿಕೆ ನೀಡಿರುತ್ತದೆ.ಈ ಕಾರ್ಮಿಕ ವರ್ಗ ಆದಾಯವಿಲ್ಲದೇ ಇರುವ ಈ ಸಂದರ್ಭದಲ್ಲಿ ಅವರ ತವರಿಗೆ ಹೋಗಲು ಪ್ರಯಾಣ ವೆಚ್ಚವನ್ನು ಭರಿಸಿ ಪ್ರಯಾಣ ಮಾಡಬೇಕೆಂದು ಸರಕಾರ ಹೇಳಿರುವುದು ಖಂಡನೀಯ. ಕಟ್ಟಡ ಕಾಮಗಾರಿಗೆ ಅನುಮತಿ ನೀಡುವ ಸಂದರ್ಭ ಕಟ್ಟಡ ಮಾಲಕರಿಂದ ಕಾರ್ಮಿಕ ಕಲ್ಯಾಣ ನಿಧಿ ಸರಕಾರ ವಸೂಲಿ ಮಾಡುತ್ತಿದ್ದು, ಆ ಹಣವನ್ನಾದರೂ ಸರಕಾರ ಕಾರ್ಮಿಕರ ಪ್ರಯಾಣ ವೆಚ್ಚಕ್ಕೆ ಉಪಯೋಗಿಸಬಹುದಿತ್ತು ಎಂದು ವಿನಯರಾಜ್ ಅಭಿಪ್ರಾಯಪಟ್ಟಿದ್ದಾರೆ.

ಈ ಕಾರ್ಮಿಕ ವರ್ಗವು ಆನ್‌ಲೈನ್ ಅರ್ಜಿ ಭರ್ತಿ ಮಾಡಲು ಪರದಾಡುತ್ತಿದೆ. ಹೆಚ್ಚಿನ ಕಾರ್ಮಿಕರಲ್ಲಿ ಅಂಡ್ರಾಯ್ಡ್  ಫೋನ್ ಇಲ್ಲದೆ ಅರ್ಜಿ ಭರ್ತಿ ಮಾಡಲು ಕಷ್ಟಪಡುತ್ತಿದ್ದಾರೆ. ಜಿಲ್ಲಾಡಳಿತ ಹೇಳಿದಂತ ಕಚೇರಿಗಳ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಆನ್ ಲೈನ್ ಅರ್ಜಿ ಹಾಕಲು ಜಮಾಯಿಸಿದ್ದು ಸುರಕ್ಷಿತ ಅಂತರ ಕಾಯ್ದುಕೊಳ್ಳುವಲ್ಲಿ ನಿರ್ದೇಶನ ನೀಡಲು ಅಥವಾ ಅರ್ಜಿ ಭರ್ತಿ ಮಾಡಲು ಯಾವುದೇ ಅಧಿಕಾರಿಗಳನ್ನು ನೇಮಿಸಿಲ್ಲ. ನೋಡಲ್ ಅಧಿಕಾರಿಗಳು ಅಥವಾ ಸಂಬಂಧಪಟ್ಟ ಇತರ ಅಧಿಕಾರಿಗಳ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಮೂರು ದಿನಗಳಿಂದ ಮನಪಾ ಕಚೇರಿಯ ಮುಂದೆ ಸಾವಿರಾರು ವಲಸೆ ಕಾರ್ಮಿಕರು ನೋಂದಣಿಗೆ ಕಾದು ಕುಳಿತಿದ್ದಾರೆ. ಇವರಿಗೆ ಅನ್ನ, ನೀರನ್ನೂ ಕೂಡಾ ಕೊಡುವಂತಹ ಸೌಜನ್ಯತೆಯನ್ನು ಸ್ಥಳೀಯ ಶಾಸಕರು ಅಥವಾ ಅಧಿಕಾರಿಗಳು ತೋರಿಸಿಲ್ಲ. ಮೂರು ದಿವಸದಿಂದ ಆನ್‌ಲೈನ್ ಸರ್ವರ್ ಡೌನ್ ಎಂದು ಹಾರಿಕೆಯ ಉತ್ತರವನ್ನು ಅಧಿಕಾರಿಗಳು ಕೊಟ್ಟು ವಾಪಸ್ ಕಳುಹಿಸುತ್ತಿದ್ದಾರೆ ಎಂದು ವಿನಯರಾಜ್ ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News