ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಿಂದ ರೈತರಿಗೆ ಹೊಸ ಸಾಲ ಯೋಜನೆ, ಸಹಾಯವಾಣಿ
ಮಂಗಳೂರು, ಮೇ 6: ಕೊರೊನ ವೈರಸ್ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್‌ಡೌನ್ ನಂತರದ ದಿನಗಳಲ್ಲಿ ಪರಿಸ್ಠಿತಿ ತಿಳಿಗೊಳ್ಳುತ್ತಿರುವ ಕಾರಣ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪೂರ್ಣಪ್ರಮಾಣದ ಬ್ಯಾಂಕಿಗ್ ಸೇವೆ ನೀಡಲು ತನ್ನೆಲ್ಲ ಶಾಖೆಗಳಿಗೆ ಆದೇಶಿಸಿದೆ ಮತ್ತು ಎಲ್ಲ ರಂಗಗಳಿಗೆ ಅದರಲ್ಲೂ ರೈತವರ್ಗಕ್ಕೆ ಸಮರ್ಪಕ ಸಾಲ ಸೌಲಭ್ಯ ಒದಗಿಸಲು ಆದೇಶ ನೀಡಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಪಿ. ಗೋಪಿಕೃಷ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ರೈತರೂ ಸಂಕಷ್ಟದಲ್ಲಿದ್ದು, ಇನ್ನೇನು ಮುಂಗಾರು ಪ್ರಾರಂಭವಾಗಲಿದೆ. ಹೀಗಾಗಿ ಅರ್ಹ ರೈತರು ಹೊಸ ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ಈಗಾಗಲೆ ಬೆಳೆಸಾಲ ಪಡೆದು ತುಂಬದಿರುವ ರೈತರು ಕೂಡ ತಮ್ಮ ಬೆಳೆಸಾಲವನ್ನು ಮರುಪಾವತಿಸಿ ಹೊಸ ಮಿತಿಯಲ್ಲಿ ನವೀಕರಿಸಿಕೊಂಡು ಹೆಚ್ಚಿನ ಸಾಲ ಸೌಲಭ್ಯ ಪಡೆಯಬಹುದಾಗಿದೆ ಎಂದೂ ಗೋಪಿ ಕೃಷ್ಣ ಹೇಳಿದರು.
2019-20ನೆ ಸಾಲಿನಲ್ಲಿ ಬ್ಯಾಂಕ್ 2,00,653 ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಿದ್ದು, 3299 ಕೋ.ರೂ. ಸಾಲ ನೀಡಿದೆ. ಬ್ಯಾಂಕು ಈ ವರ್ಷದ ಸಾಲಿನಲ್ಲಿ ಕೃಷಿ ರಂಗಕ್ಕೆ 3,700 ಕೋ.ರೂ. ಸಾಲ ವಿತರಿಸುವ ಗುರಿ ಹೊಂದಿದೆ ಎಂದು ಗೋಪಿಕೃಷ್ಣ ಹೇಳಿದ್ದಾರೆ.
ತುರ್ತು ಸಾಲ ಯೋಜನೆ-ರೈತರಿಗೆ ಬೇಡಿಕೆ ಸಾಲ
ವಿಶೇಷವಾಗಿ ಬೇಡಿಕೆ ಸಾಲ ಸಿಗುವುದು ಸಂಬಳ ವರ್ಗಕ್ಕೆ ಮಾತ್ರ. ಆದರೆ ರೈತರು ಸಂಕಷ್ಟದಲ್ಲಿರುವುದನ್ನು ಗಮನಿಸಿ ರೈತರಿಗೂ ಬೇಡಿಕೆ ಸಾಲವನ್ನು ವಿಸ್ತರಣೆ ಮಾಡಲಾಗಿದೆ. ಈ ಯೋಜನೆಯಡಿ ಕೃಷಿ ಸಾಲ ಖಾತೆಯನ್ನು ಫೆ.29ರವರೆಗೆ ನಿಯಮಿತವಾಗಿಟ್ಟವರಿಗೆ ಬದುಕು ಕಟ್ಟಿಕೊಳ್ಳಲು 50,000 ರೂ. ಸಾಲವನ್ನು ನೀಡಲಾಗುವುದು. ಈ ಸಾಲ ತುಂಬಲು ಗರಿಷ್ಟ 3 ವರ್ಷಗಳ ಕಾಲಾವಕಾಶವಿದೆ ಎಂದಿದ್ದಾರೆ.
ಸಹಾಯವಾಣಿ ಪ್ರಾರಂಭ
ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಅದರಲ್ಲೂ ವಿಶೇಷವಾಗಿ ರೈತರಿಗೆ ಸಾಲ ಸಂಬಂಧಿ ಸಂಶಯಗಳನ್ನು ಪರಿಹರಿಸಿಕೊಳ್ಳಲು ಸಹಾಯವಾಣಿಯನ್ನು ಪ್ರಾರಂಭಿಸಿದೆ. ಮೊ.ಸಂ: 9108699803ಕ್ಕೆ ರಜಾದಿನಗಳನ್ನು ಹೊರತುಪಡಿಸಿ ಬೆಳಗ್ಗೆ 10ರಿಂದ ಸಂಜೆ 5ರೊಳಗೆ ಸಂಪರ್ಕಿಸಬಹುದು. ಮೊದಲು ಸಂಬಂಧಿತ ಶಾಖೆಯನ್ನು ಸಂಪರ್ಕಿಸಿ ಅಲ್ಲಿ ಪರಿಹಾರ ದೊರೆಯದಿದ್ದಲ್ಲಿ ಮಾತ್ರ ಈ ಸಹಾಯುವಾಣಿಯನ್ನು ಸಂಪರ್ಕಿಸಬಹುದು. ಸದ್ಯದ ತುರ್ತು ಪರಿಸ್ಥಿತಿಯಲ್ಲಿ ಯಾವ ಕಾರಣಕ್ಕೂ ಅರ್ಹ ರೈತರು ಸಾಲ ಸೌಲಭ್ಯದಿಂದ ವಂಚಿತರಾಗಬಾರದು ಎಂಬುದು ಬ್ಯಾಂಕ್‌ನ ಉದ್ದೇಶವಾಗಿದೆ ಎಂದೂ ಗೋಪಿಕೃಷ್ಣ ತಿಳಿಸಿದ್ದಾರೆ.