×
Ad

ಲೇಡಿಗೋಷನ್ ಆಸ್ಪತ್ರೆ, ಬೀದಿಬದಿ ವ್ಯಾಪಾರ ವಲಯ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ

Update: 2020-05-06 20:53 IST

 ಮಂಗಳೂರು, ಮೇ 6: ನೂತನ ಕೇಂದ್ರ ಮಾರುಕಟ್ಟೆ ನಿರ್ಮಾಣಕ್ಕಾಗಿ ಅಲ್ಲಿನ ಮಾರುಕಟ್ಟೆ ನೆಲಸಮಗೊಳಿಸಿ ಚಿಲ್ಲರೆ ವ್ಯಾಪಾರಿಗಳಿಗೆ ಅನುವು ಮಾಡಿಕೊಡುವ ಸಲುವಾಗಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಮಾಡಲು ಬೀದಿಬದಿ ವ್ಯಾಪಾರ ವಲಯವನ್ನು ಬಳಕೆ ಮಾಡಿರುವುದು ಖಂಡನೀಯ ಎಂದು ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ಎರಡು ತಿಂಗಳಿನಿಂದ ಕೋವಿಡ್ 19 ನಿಗ್ರಹ ಕ್ರಮ ಜಾರಿಯಲ್ಲಿರುವಾಗ ಜನರು ಯಾವುದೇ ಪ್ರತಿರೋಧ ತೋರಲು ಸಾಧ್ಯವಿಲ್ಲ ಎಂದು ಜಿಲ್ಲೆ ಮತ್ತು ನಗರಾಡಳಿತ ಕಾನೂನು ಬಾಹಿರ ತೀರ್ಮಾನಗಳನ್ನು ಜಾರಿ ಮಾಡುತ್ತಿದೆ. ಲೇಡಿಗೋಷನ್ ಆಸ್ಪತ್ರೆ ಬಳಿ ಬೀದಿಬದಿ ವ್ಯಾಪಾರಿಗಳು 2 ಅಡಿ ಜಾಗದಲ್ಲಿ ವ್ಯಾಪಾರ ಮಾಡುವಾಗ ಸಂಚಾರಕ್ಕೆ ಮತ್ತು ಆಸ್ಪತ್ರೆಗೆ ತೊಂದರೆ ಆಗುತ್ತದೆ ಎಂದು ಪದೇ ಪದೇ ದಾಳಿ ಮಾಡುತ್ತಿದ್ದ ಪಾಲಿಕೆ ಅಧಿಕಾರಿಗಳು ಇದೀಗ 10 ಅಡಿ ಉದ್ದ ರಸ್ತೆಯ ಮೇಲೆ ತಾತ್ಕಾಲಿಕ ಮಳಿಗೆಯನ್ನು ನಿಯಮ ಬಾಹಿರವಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಆಸ್ಪತ್ರೆಯ ಗೋಡೆಗೆ ತಾಗಿಕೊಂಡು ಶೀಟುಗಳನ್ನು ಅಳವಡಿಸುತ್ತಿದ್ದಾರೆ. ಇದೇ ಲೇಡಿಗೋಷನ್ ಆಸ್ಪತ್ರೆಯ ಹೊರಭಾಗದಲ್ಲಿ 40 ವರ್ಷಗಳಿಂದ ವ್ಯಾಪಾರ ಮಾಡುತ್ತಾ ಬಂದಿರುವ ನಗರ ಪಾಲಿಕೆಯಿಂದ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ಪಡೆದಿರುವ ಬೀದಿ ವ್ಯಾಪಾರಿಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಘೋರ ಅನ್ಯಾಯ ಮಾಡಿದೆ ಎಂದು ಸಂಘದ ಗೌರವಾಧ್ಯಕ್ಷ ಬಿಕೆ ಇಮ್ತಿಯಾಝ್ ಆರೋಪಿಸಿದ್ದಾರೆ.

ನಗರ ಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿ ಇದ್ದರೂ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮತ್ತು ಸಮಿತಿಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೆ ಬೀದಿ ಬದಿ ವ್ಯಾಪಾರ ವಲಯನ್ನು ಇತರ ಉದ್ದೇಶಕ್ಕೆ ಬಳಸಿರುವುದು ಬೀದಿಬದಿ ವ್ಯಾಪಾರಸ್ಥರ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ 2014ರ ಸ್ಪಷ್ಟ ಉಲ್ಲಂಘನೆಯಾಗಿದೆ. ಒಂದು ಕಡೆ ವ್ಯಾಪಾರ ವಲಯವನ್ನು ಕಸಿದು ಕೊಂಡು ಮತ್ತೊಂದೆಡೆ ಬೀದಿಯಲ್ಲೂ ವ್ಯಾಪಾರ ಮಾಡದ ರೀತಿಯಲ್ಲಿ ಜನ ವಿರೋಧಿ ತೀರ್ಮಾನ ಜಾರಿ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಈಗಾಗಲೇ ಲಾಕ್‌ಡೌನ್ ಸಡಿಲಿಕೆ ಮಾಡಿದ್ದರೂ ಬೀದಿಬದಿ ವ್ಯಾಪಾರಕ್ಕೆ ಇನ್ನೂ ಅವಕಾಶ ನೀಡಿಲ್ಲ. ಕಳೆದ ಎರಡು ತಿಂಗಳಿನಿಂದ ಆದಾಯವಿಲ್ಲದೆ ಬೀದಿಬದಿ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಅಹಾರ ಸಾಮಗ್ರಿಗಳ ಕಿಟ್ ಒದಗಿಸಲಾಗದ ಜಿಲ್ಲಾಡಳಿತ ಬೀದಿಬದಿ ವ್ಯಾಪಾರಿಗಳಿಗೆ ನೆರವು ನೀಡುವ ಬದಲು ಬಡ ವ್ಯಾಪಾರಿಗಳು ಮಾರಲು ತರುವ ಹಣ್ಣು ತರಕಾರಿಗಳನ್ನು ವಶಪಡಿಸಿ ತ್ಯಾಜ್ಯ ಕೊಂಡೊಯ್ಯುವ ಲಾರಿಗೆ ಸುರಿದು ಅವರ ತೂಕದ ಯಂತ್ರಗಳನ್ನು ವಶಪಡಿಸಿಕೊಂಡು ಅಮಾನವೀಯತೆ ಮೆರೆಯುತ್ತಿದೆ. ಜಿಲ್ಲಾಡಳಿತ ಬೀದಿಬದಿ ವ್ಯಾಪಾರಿಗಳ ಮೇಲೆ ಕಠೋರವಾಗಿ ವರ್ತಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿರುವ ಇಮ್ತಿಯಾಝ್, ತಕ್ಷಣ ಇಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಪ್ರಕ್ರಿಯೆ ನಿಲ್ಲಿಸಬೇಕು. ಇಲ್ಲದಿದ್ದರೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಕುಟುಂಬ ಸಮೇತ ಪ್ರತಿಭಟನೆ ನಡೆಸಿ ಸಾಮೂಹಿಕ ಕ್ವಾರಂಟೈನ್‌ಗೆ ಒಳಗಾಗಲಿದ್ದೇವೆ ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News