ಉಡುಪಿ: ಬಸ್‌ಗಳ ಓಡಾಟದ ಆರಂಭಕ್ಕೆ ಶುಕ್ರವಾರ ಬೆಂಗಳೂರಲ್ಲಿ ಸಭೆ
ಉಡುಪಿ, ಮೇ 6: ಲಾಕ್‌ಡೌನ್ ಇದ್ದರೂ ಹಸಿರು ವಲಯದಲ್ಲಿರುವ ಜಿಲ್ಲೆಗಳ ಒಳಗೆ ಬಸ್ಸುಗಳ ಓಡಾಟಕ್ಕೆ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಸಿರು ನಿಶಾನೆ ತೋರಿಸಿವೆ. ಆದರೆ ಉಡುಪಿ ಜಿಲ್ಲೆ ಹಸಿರು ವಲಯದಲ್ಲಿ ಇದ್ದರೂ, ಇಲ್ಲಿ ಸಾರಿಗೆ ಸಂಚಾರವನ್ನು ಹೊರತು ಪಡಿಸಿ ಉಳಿದೆಲ್ಲಾ ಅಗತ್ಯ ಸೇವೆಗಳನ್ನು ವಿನಾಯತಿಗಳೊಂದಿಗೆ ಜಾರಿಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲೂ ಸಂಚಾರ ವ್ಯವಸ್ಥೆಯನ್ನು ಪ್ರಾರಂಭಿಸುವ ಬಗ್ಗೆ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳು, ಖಾಸಗಿ ಬಸ್‌ಗಳ ಮಾಲಕರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದರು.
ಸಾರಿಗೆ ವ್ಯವಸ್ಥೆ ಕರಾವಳಿ ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬಾಗಿರುವ ಹಿನ್ನೆಲೆಯಲ್ಲಿ ಇಲ್ಲೂ ಸಾರಿಗೆ ವ್ಯವಸ್ಥೆಯನ್ನು ಪುನರಾರಂಭಿಸುವಂತೆ ಒತ್ತಡಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ನಡೆದ ಸಂಬಂಧಿತರ ಸಭೆಯಲ್ಲಿ, ಖಾಸಗಿ ಬಸ್ಸುಗಳ ಮಾಲಕರ ಬೇಡಿಕೆಗಳು ಹಾಗೂ ಅಭಿಪ್ರಾಯ ಗಳನ್ನು ತಿಳಿಸಲು ಮೇ 8ರಂದು ಬೆಂಗಳೂರಿನಲ್ಲಿ ಸಾರಿಗೆ ಸಚಿವರ ನೇತೃತ್ವದಲ್ಲಿ ರಾಜ್ಯಮಟ್ಟದ ಸಭೆ ನಡೆಸಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಈ ಸಭೆಯಲ್ಲಿ ಬಸ್‌ಗಳ ಸಂಚಾರದ ದಿನಾಂಕದೊಂದಿಗೆ ಬಸ್ ದರ ಏರಿಕೆ, ತೆರಿಗೆ ಕಡಿತದ ಕುರಿತಂತೆಯೂ ಚರ್ಚೆ ನಡೆಯಲಿದೆ. ಆ ಬಳಿಕ ವಷ್ಟೇ ಬಸ್ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳನ್ನು ಓಡಿಸಲು ಆಯ್ದ ರೂಟ್‌ಗಳನ್ನು ಸೂಚಿಸಿ ಸರ್ವೇ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಉಡುಪಿ, ಕಾರ್ಕಳ, ಹೆಬ್ರಿ, ಕುಂದಾಪುರ, ಮಲ್ಪೆ, ಹೂಡೆ ಸಹಿತ ಹಲವಾರು ಪ್ರದೇಶಗಳಿಗೆ ಬಸ್‌ಸಂಚಾರ ಕಲ್ಪಿಸುವ ಬಗ್ಗೆ ಮಾತುಕತೆ ನಡೆಯಿತು.
ಕೋವಿಡ್-19 ಹಿನ್ನೆಲೆಯಲ್ಲಿ ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸಿ ಬಸ್‌ಗಳನ್ನು ಓಡಿಸಲು ಕೆಎಸ್ಸಾರ್ಟಿಸಿ ಒಪ್ಪಿಗೆ ಸೂಚಿಸಿತು. ಬಸ್‌ಗಳಲ್ಲಿ ಶೇ.50 ರಷ್ಟು ಮಾತ್ರ ಪ್ರಯಾಣಿಕರು ಸಂಚರಿಸಲು ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು. ಆದರೆ ಖಾಸಗಿ ಬಸ್ ಮಾಲಕರು ಈ ರೀತಿ ಮಾಡುವುದರಿಂದ ನಷ್ಟದಲ್ಲಿರುವ ಸಾರಿಗೆ ಉದ್ದಿಮೆಗೆ ಮತ್ತಷ್ಟು ಹೊರೆ ಬೀಳಲಿದೆ ಎಂದರು. ಇದಕ್ಕಾಗಿ ಬಸ್ ಟಿಕೆಟ್ ದರ ಏರಿಕೆ ಅನಿವಾರ್ಯ. ಅಲ್ಲದೆ ತೆರಿಗೆ ಯಲ್ಲೂ ವಿನಾಯಿತಿ ನೀಡುವಂತೆ ಖಾಸಗಿ ಬಸ್ ಮಾಲಕರು ಬೇಡಿಕೆ ಮುಂದಿಟ್ಟರು. ಆದರೆ ದರ ಏರಿಕೆ ಮಾಡು ವುದು ಇಂದಿನ ಸಂದರ್ಭದಲ್ಲಿ ಸೂಕ್ತವಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ರಿಯಾಯಿತಿಗೆ ಆಗ್ರಹ: ಜಿಲ್ಲೆಯಲ್ಲಿ ಬಹುತೇಕ ಎಲ್ಲ ಉದ್ದಿಮೆಗಳಿಗೆ ಈಗಾಗಲೇ ಅವಕಾಶ ಕಲ್ಪಿಸಿದಂತೆ ಅವಿಭಜಿತ ದ.ಕ. ಜಿಲ್ಲೆಯ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ಬಸ್ಸುಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಖಾಸಗಿ ಬಸ್ ಮಾಲಕರು ಮನವಿ ಮಾಡಿದರು.ಆದರೆ ಜಿಲ್ಲಾಡಳಿತ ಸೂಚಿಸಿದ ನಿಯಮಾವಳಿ ಗಳಿಗೆ ಬಸ್ ಮಾಲಕರು ಒಪ್ಪದ ಕಾರಣ ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ಸಭೆಯ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಲು ಬಸ್ ಮಾಲಕರು ನಿರ್ಧರಿಸಿದರು. ಟೋಲ್‌ದರ ಹಾಗೂ ತೆರಿಗೆಗಳಲ್ಲಿ ರಿಯಾಯಿತಿ ನೀಡ ಬೇಕೆಂಬುದು ಅವರ ಪ್ರಮುಖ ಬೇಡಿಕೆಗಳಾಗಿದ್ದವು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ, ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಸಿಟಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕೆಎಸ್ಸಾರ್ಟಿಸಿ ಅಧಿಕಾರಿ ಗಳು, ವಿವಿಧ ಖಾಸಗಿ ಬಸ್‌ಗಳ ಮಾಲಕರು ಭಾಗವಹಿಸಿದ್ದರು.