×
Ad

ಕೊರೋನ: ಬಂಟ್ವಾಳದಲ್ಲಿ 9ಕ್ಕೆ ಏರಿದ ಸೋಂಕಿತರ ಸಂಖ್ಯೆ

Update: 2020-05-06 21:43 IST

ಬಂಟ್ವಾಳ, ಮೇ 6: ತಾಲೂಕಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಪೇಟೆಯ 16 ವರ್ಷ ಪ್ರಾಯದ ಬಾಲಕಿಯೊಬ್ಬಳಿಗೆ ಬುಧವಾರ ಕೋವಿಡ್ -19 (ಕೊರೋನ) ಸೋಂಕು ದೃಢಪಟ್ಟಿದ್ದು ಇದರೊಂದಿಗೆ ಬಂಟ್ವಾಳ ಪೇಟೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 6ಕ್ಕೆ ಹಾಗೂ ತಾಲೂಕಿನಲ್ಲಿ 9ಕ್ಕೆ  ಏರಿಕೆಯಾಗಿದೆ.

ಇಂದು ಸೋಂಕು ದೃಢಪಟ್ಟ ಬಾಲಕಿ ಕೊರೋನ ಸೋಂಕಿನಿಂದ ಎಪ್ರಿಲ್ 19ರಂದು ಹಠಾತ್ ನಿಧನರಾದ ಬಂಟ್ವಾಳ ಪೇಟೆಯ 45 ವರ್ಷ ಪ್ರಾಯದ ಮಹಿಳೆಯ ಪುತ್ರಿಯಾಗಿದ್ದಾಳೆ. ತಾಯಿಯ ನಿಧನದ ಬಳಿಕ ಈಕೆ ಸಹಿತ ಈಕೆಯ ತಂದೆ, ಸಹೋದರನನ್ನು ಸುರತ್ಕಲ್ ಎನ್.ಐ.ಟಿ.ಕೆ. ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. 16 ದಿನಗಳ ಬಳಿಕ ಬಾಲಕಿಯಲ್ಲಿ ಸೋಂಕು ದೃಢಪಟ್ಟಿದ್ದು ಬಾಲಕಿಯನ್ನು ಮಂಗಳೂರು ಕೋವಿಡ್ (ವೆನ್ ಲಾಕ್) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಬಂಟ್ವಾಳ ಪೇಟೆಯ ಒಟ್ಟು ಆರು ಮಂದಿಗೆ ಕೊರೋನ ಸೋಂಕು ದೃಢಪಟ್ಟು ಆ ಪೈಕಿ ಮೂವರು ಮೃತಪಟ್ಟಿದ್ದಾರೆ. ಉಳಿದ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸೋಂಕು ದೃಢಪಟ್ಟ ಬಾಲಕಿಯ ತಾಯಿ,‌ ಅಜ್ಜಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರ ನೆರೆ ಮನೆಯ ಮಹಿಳೆ ಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದು ಅವರ 33 ವರ್ಷ ಪ್ರಾಯದ ಮಗಳಿಗೆ ಸೋಂಕು ದೃಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಇದೇ ವಠಾರದ ವೃದ್ಧರೊಬ್ಬರಿಗೆ ಸೋಂಕು ದೃಢಪಟ್ಟಿದ್ದು ಅವರು ಕೂಡಾ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಬಂಟ್ವಾಳ ತಾಲೂಕಿನ ಸಜಿಪ ನಡು ಗ್ರಾಮದ ಹತ್ತು ತಿಂಗಳ ಮಗುವಿಗೆ ಮಾರ್ಚ್ 27ರಂದು ಕೊರೋನ ಸೋಂಕು ದೃಢಪಡುವ ಮೂಲಕ ಬಂಟ್ವಾಳದಲ್ಲಿ ಮೊದಲ ಪ್ರಕರಣ ವರದಿಯಾಗಿತ್ತು. ಅಲ್ಲದೆ ಇದು ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಲ್ಲಿ ಪತ್ತೆಯಾದ ಮೊದಲ ಪ್ರಕರಣವೂ ಆಗಿತ್ತು.

ಎಪ್ರಿಲ್ 4ರಂದು ತುಂಬೆಯ ಯುವಕನೋರ್ವನಲ್ಲಿ ಸೋಂಕು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಎರಡನೇ ಪ್ರಕರಣ ವರದಿಯಾಗಿತ್ತು. ಆ ಬಳಿಕ ಎಪ್ರಿಲ್ 19ರಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಂಟ್ವಾಳ ಪೇಟೆಯ ಮಹಿಳೆಯೊಬ್ಬರು ಸೋಂಕಿನಿಂದ ಮೃತ ಪಡುವ ಮೂಲಕ ಜಿಲ್ಲೆಯಲ್ಲಿ ಮೂರನೇ ಪ್ರಕರಣ ವರದಿಯಾಗಿತ್ತು ಅಲ್ಲದೆ ಮೊದಲ ಸಾವು ಕೂಡ ಸಂಭವಿಸಿತ್ತು. ಆ ಬಳಿಕ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಹೋದವು.

ಸಜಿಪ ನಡು 1, ತುಂಬೆ 1, ಬಂಟ್ವಾಳ ಪೇಟೆ 6, ನರಿಕೊಂಬು ಗ್ರಾಮದ ನಾಯಿಲದಲ್ಲಿ 1 ಸೇರಿ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 9 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಅವರಲ್ಲಿ ಬಂಟ್ವಾಳ ಪೇಟೆಯ ಮೂವರು ಮಹಿಳೆಯರು ಮೃತಪಟ್ಟಿದ್ದು, ಸಜಿಪ ನಡುವಿನ ಮಗು ಹಾಗೂ ತುಂಬೆಯ ಯುವಕ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ನರಿಕೊಂಬು ಗ್ರಾಮದ ಮಹಿಳೆ, ಬಂಟ್ವಾಳ ಪೇಟೆಯ ಬಾಲಕಿ, ಯುವತಿ, ವೃದ್ಧ ಒಟ್ಟು ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News