×
Ad

ಉಡುಪಿ: ವಾರದ ಸಂತೆ ಅರ್ಧಕ್ಕೆ ಮೊಟಕು

Update: 2020-05-06 21:56 IST

ಉಡುಪಿ, ಮೇ 6: ಆದಿಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುವ ಬುಧವಾರದ ಉಡುಪಿ ವಾರದ ಸಂತೆ ಇಂದು ಮಾರುಕಟ್ಟೆಯ ಹೊರಗೆ ರಸ್ತೆಯ ಇಬ್ಬದಿಗಳಲ್ಲಿ ಆರಂಭಗೊಂಡರೂ, ಪೊಲೀಸರ ಮಧ್ಯ ಪ್ರವೇಶದಿಂದಾಗಿ ಕೆಲವೇ ಹೊತ್ತಿನಲ್ಲಿ ಸ್ಥಗಿತಗೊಂಡಿತು.

ಸಂತೆ ವ್ಯಾಪಾರಕ್ಕಾಗಿ ದೂರದೂರುಗಳಿಂದ ಆಗಮಿಸಿದ್ದ ವ್ಯಾಪಾರಿಗಳು ವ್ಯಾಪಾರ ಮಾಡಲಾದೆ ಗಂಟುಮೂಟೆ ಕಟ್ಟಬೇಕಾಯಿತು.
 ಉಡುಪಿಯಲ್ಲಿ ಈಗ ಸಂಜೆ 7 ಗಂಟೆಯವರೆಗೆ ಲಾಕ್‌ಡೌನ್ ಸಡಿಲ ಗೊಂಡಿರುವುದರಿಂದ ಸಂತೆ ನಡೆದು ವ್ಯಾಪಾರ ಮಾಡಲು ಅವಕಾಶ ಸಿಗಬಹುದೆಂದು ಕೊಂಡಿದ್ದೆವು. ಆದರೆ ಪೊಲೀಸರು ಈಗ ವ್ಯಾಪಾರಕ್ಕೆ ಅವಕಾಶ ನೀಡುತ್ತಿಲ್ಲ. ತಂದ ತರಕಾರಿಗಳನ್ನು ಮತ್ತೆ ವಾಹನಗಳಿಗೆ ತುಂಬಿಸಬೇಕಾಗಿದೆ ಎಂದು ವ್ಯಾಪಾರಿಗಳು ದೂರಿದರು.

ಸರಕಾರ ಮದ್ಯದಂಗಡಿಗಳಿಗೆ ಜನರನ್ನು ಕಿಲೋಮೀಟರ್ ಉದ್ದಕ್ಕೆ ಸರದಿ ಸಾಲು ನಿಲ್ಲಿಸಿ ಮದ್ಯ ಮಾರಲು ಅವಕಾಶ ನೀಡುತ್ತಿದೆ. ಆದರೆ ನಮ್ಮಂತಹವರಿಗೆ ಇಲ್ಲಿ ತರಕಾರಿ ಮಾರಲು ಅವಕಾಶ ಇಲ್ಲ ಎಂದು ತರಕಾರಿ ವ್ಯಾಪಾರಿಗಳು ಅಲವತ್ತು ಕೊಂಡರು.

ಈ ಗೊಂದಲದ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದರೆ, ನಾವು ಬೆಳಗ್ಗೆ 5 ಗಂಟೆಗೇ ಬಂದು ಇಲ್ಲಿ ಇವತ್ತು ಸಂತೆ ನಡೆಸಬಾರದೆಂದು ಇಲ್ಲಿದ್ದವರಿಗೆ ಸೂಚನೆ ಕೊಟ್ಟು ಹೋಗಿದ್ದೇವೆ.ತರಕಾರಿ ವ್ಯಾಪಾರಿಗಳಿಗೆ ಬೀಡಿನಗುಡ್ಡೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಅಲ್ಲದೆ ಲೈನ್‌ಸೇಲ್ ಮಾಡಲೂ ಅವಕಾಶ ನೀಡಲಾಗಿದೆ. ಆದರೆ ಇವರೆಲ್ಲ ಇಲ್ಲಿ ವ್ಯಾಪಾರ ಆರಂಭಿಸಿ ಜನ ಸೇರಿಸುತ್ತಿದ್ದಾರೆ ಎಂದು ಸಂತೆ ವ್ಯಾಪಾರ ನಿಲ್ಲಿಸಿದ್ದರ ಬಗ್ಗೆ ಸಮರ್ಥನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News