ಲಾಕ್‌ಡೌನ್ ಸಡಿಲಿಕೆ: ಜನಜೀವನ ಸಹಜತೆಯತ್ತ ಮರಳಲು ಪರದಾಟ

Update: 2020-05-07 05:54 GMT

ಮಂಗಳೂರು, ಮೇ 7: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ದ.ಕ. ಜಿಲ್ಲೆಯಲ್ಲಿ ಸಡಿಲಿಕೆಗೊಂಡಿದ್ದರೂ ಜನಜೀವನ ಸಹಜತೆಗೆ ವಾಪಾಸಾಗುವಲ್ಲಿ ಪರದಾಡುವಂತಾಗಿದೆ.

ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಜಿಲ್ಲೆಯಲ್ಲಿ ಖಾಸಗಿ ವಾಹನ ಸಂಚಾರ ನಿರಾತಂಕವಾಗಿದೆ (ಬಸ್ಸುಗಳನ್ನು ಹೊರತುಪಡಿಸಿ). ದ್ವಿಚಕ್ರ, ಕಾರು, ಲಾರಿ, ಟ್ಯಾಕ್ಸಿ, ಆಟೋರಿಕ್ಷಾಗಳ ಓಡಾಟ ಸಾಮಾನ್ಯವಾಗಿದೆ. ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಕಾರ್ಯಾಚರಿಸುತ್ತಿವೆ. ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಯೊಳಗೆ ಬಾಕಿಯಾಗಿದ್ದವರು ತಮ್ಮ ಕಾರ್ಯ ಚಟುವಟಿಕೆಗಳಿಗೆ ತೆರಳಲು ಆರಂಭಿಸಿದ್ದಾರೆ. ಇಂದಿನಿಂದ ನಗರದಲ್ಲಿ ಬಟ್ಟೆ ಅಂಗಡಿಗಳೂ ತೆರೆಯಲಾರಂಭಿಸಿವೆ. ಹಾಗಿದ್ದರೂ ದಿನಸಿ, ಹಣ್ಣುಹಂಪಲು, ತರಕಾರಿ ಹೊರತುಪಡಿಸಿ ಇತರ ವ್ಯವಹಾರ, ವ್ಯಾಪಾರ ಅತ್ಯಂತ ಕ್ಷೀಣವಾಗಿದೆ.

ಅಂಗಡಿಗಳು, ಸಣ್ಣ ಪುಟ್ಟ ಮಳಿಗೆಗಳು ತೆರೆಯಲ್ಪಡುತ್ತಿದ್ದರೂ, ಜನರು ತಮ್ಮ ಉದ್ಯೋಗ, ಕಾರ್ಯ ಚಟುವಟಿಕೆಗಳಿಗೆ ಹೋಗಲು ಮುಂದಾಗುತ್ತಿದ್ದರೂ, ವ್ಯಾಪಾರ ವಹಿವಾಟಿನಲ್ಲಿ ಬೇಡಿಕೆ ಕುಗ್ಗಿರುವುದರಿಂದ ಬಹುತೇಕ ಮಾಲಕರು ಕಂಗಾಲಾಗಿದ್ದಾರೆ. ಬಟ್ಟೆ ಅಂಗಡಿಗಳು ತೆರೆದರೂ ಗ್ರಾಹಕರಿಲ್ಲದ ಚಿಂತೆ ಒಂದೆಡೆಯಾದರೆ, ಕಳೆದ ಸುಮಾರು ಒಂದೂವರೆ ತಿಂಗಳ ನಷ್ಟವನ್ನು ಸರಿದೂಗಿಸುವ ಆತಂಕ ವ್ಯಾಪಾರ, ವ್ಯವಹಾರಸ್ಥರದ್ದಾಗಿದೆ. ಇತ್ತ ಕೆಲಸಕ್ಕೆ ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲದೆ (ಬಸ್ಸುಗಳ ಸಂಚಾರ ಆರಂಭವಾಗಿಲ್ಲ) ಒದ್ದಾಡುತ್ತಿದ್ದರೆ, ಕೆಲಸಕ್ಕೆ ಹೋಗದಿದ್ದರೆ ಎಲ್ಲಿ ತಾವು ಉದ್ಯೋಗವನ್ನು ಕಳೆದುಕೊಳ್ಳಬೇಕಾಗುತ್ತದೆಯೋ ಎಂಬ ಭೀತಿಯೂ ಕಾಡುವಂತಾಗಿದೆ. ಕಾರ್ಯ ಚಟುವಟಿಕೆ ಆರಂಭಿಸಿರುವ ಅಂಗಡಿ, ಕಚೇರಿಗಳಲ್ಲೂ ನಿಯಮಗಳನ್ನು ಪಾಲಿಸಬೇಕಾಗಿರುವುದರಿಂದ ಸಿಬ್ಬಂದಿಯನ್ನು ಯಾವ ರೀತಿಯಲ್ಲಿ, ತೊಡಗಿಸಿಕೊಳ್ಳಬೇಕೆಂಬ ಚಿಂತೆ ಸಂಸ್ಥೆಗಳ ಮಾಲಕರದ್ದಾಗಿದೆ.

ಕಟ್ಟಡ ನಿರ್ಮಾಣ ಕಾಮಗಾರಿ ಚೇತರಿಕೆ

ಲಾಕ್‌ಡೌನ್ ಸಡಿಲಿಕೆಯ ನಡುವೆ ಮಂಗಳೂರು ನಗರದ ಕೆಲವು ಭಾಗಗಳಲ್ಲಿ ಸಣ್ಣ ಪುಟ್ಟ ನಿರ್ಮಾಣ ಕಾಮಗಾರಿ ಚುರುಕು ಪಡೆದಿದೆ. ಕೆಲ ವಾರ್ಡ್‌ಗಳಲ್ಲಿ ರಸ್ತೆ ಕಾಂಕ್ರಿಟೀಕರಣ ಆರಂಭಗೊಂಡಿದ್ದರೆ, ಮತ್ತೆ ಕೆಲಡವೆಗೆ ಕಟ್ಟಡ ನಿರ್ಮಾಣ ಕಾಮಗಾರಿಗಳೂ ಅತ್ಯಲ್ಪ ಕಾರ್ಮಿಕರೊಂದಿಗೆ ನಡೆಯುತ್ತಿದೆ. ನಗರದಲ್ಲಿ ಚಪ್ಪಲಿ, ಆಟಿಕೆ ಸಾಮಗ್ರಿ, ಮೊಬೈಲ್ ಶಾಪ್, ರಿಟೇಲ್ ಮಳಿಗೆಗಳು, ಗೃಹಪಯೋಗಿ ಶಾಪಿಂಗ್ ಸೆಂಟರ್‌ಗಳು ಸೇರಿದಂತೆ ಇಂದಿನಿಂದ ಕೆಲವೊಂದು ಬಟ್ಟೆ ಅಂಗಡಿಗಳ ಬಾಗಿಲೂ ತೆರೆದಿವೆ. ಇದೇ ವೇಳೆ ಸರಕಾರಿ ಕಚೇರಿಗಳು, ಬ್ಯಾಂಕ್‌ಗಳು ಸೀಮಿತ ಸಿಬ್ಬಂದಿಯೊಂದಿಗೆ ಲಾಕ್‌ಡೌನ್ ಸಂದರ್ಭದಂತೆಯೇ ಕಾರ್ಯಾಚರಣೆ ನಡೆಸುತ್ತಿವೆ. ನಗರದ ಕೆಲವೊಂದು ಖಾಸಗಿ ಕ್ಲಿನಿಕ್‌ಗಳು, ಆಸ್ಪತ್ರೆಗಳು, ಆಯುರ್ವೇದಿಕ್ ಆಸ್ಪತ್ರೆಗಳು ಕಾರ್ಯಾಚರಿಸುತ್ತಿವೆಯಾದರೂ, ವೈದ್ಯಕೀಯೇತರ ಸಿಬ್ಬಂದಿಗೆ ಅರ್ಧ ದಿನ ಕೆಲಸ ಅಥವಾ ಎರಡು ದಿನಕ್ಕೊಮ್ಮೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಮದ್ಯದಂಗಡಿಯಲ್ಲಿ ಕುಗ್ಗಿಲ್ಲ ಬೇಡಿಕೆ!

ಈ ನಡುವೆ, ಕಳೆದ ಸೋಮವಾರದಿಂದ ಮದ್ಯದಂಗಡಿಗಳು ಕಾರ್ಯಾಚರಣೆ ಆರಂಭಿಸಿದ್ದು, ಎರಡು ದಿನಗಳಲ್ಲಿ ಕಂಡುಬಂದ ಮದ್ಯಪ್ರಿಯರ ಸರತಿ ಸಾಲು ಸದ್ಯ ಇಲ್ಲವಾಗಿದೆ. ಹಾಗಿದ್ದರೂ ಖರೀದಿದಾರರು ಕಾಣಿಸುತ್ತಿದ್ದಾರೆ.

ವಾಚ್‌ಮೆನ್‌ಗಳಿಗೆ ಕೆಲಸವಿಲ್ಲ!
ಮದ್ಯದಂಗಡಿ ಸೇರಿದಂತೆ ನಗರದ ಕೆಲವು ಕಡೆಯ ಸಂಸ್ಥೆಗಳಲ್ಲಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವಾಚ್‌ಮೆನ್‌ಗಳಿಗೆ ಕೆಲಸದ ಭೀತಿ ಎದುರಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳ ರಜೆಯನ್ನು (ಸಂಬಳ ರಹಿತ) ಮಾಡುವಂತೆ ಕೆಲ ವಾಚ್‌ಮೆನ್‌ಗಳಿಗೆ ತಿಳಿಸಲಾಗಿದೆ. ಲಾಕ್‌ಡೌನ್ ಸಂಪೂರ್ಣ ತೆರವಾದರೂ ಮುಂದೆ ಕೆಲಸ ಸಿಗುವುದೇ ಎಂಬ ಆತಂಕ ಅವರದ್ದಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News