×
Ad

ಖಾಸಗಿ ಆಂಗ್ಲಮಾಧ್ಯಮ ಶಾಲೆಗಳಿಗೆ ನೆರವು ನೀಡಲು ಸರಕಾರಕ್ಕೆ ಮನವಿ

Update: 2020-05-07 18:00 IST

ಮಂಗಳೂರು, ಮೇ 7: ಕೊರೋನ-ಲಾಕ್‌ಡೌನ್‌ನಿಂದ ಸಮಸ್ಯೆಗೆ ಸಿಲುಕಿರುವ ಖಾಸಗಿ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಯೋಜನೆಯ ಮೂಲಕ ನೆರವು ನೀಡಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಅಸೋಸಿಯೇಶನ್ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ.

ಶಾಲಾ ಶುಲ್ಕ ಸರಿಯಾಗಿ ಪಾವತಿಯಾಗದಿರುವುದರಿಂದ ಸಿಬ್ಬಂದಿಗೆ ಕ್ಲಪ್ತ ಸಮಯದಲ್ಲಿ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ವಾಗಿ ಮಾರ್ಚ್‌ನಲ್ಲಿ ಬಾಕಿ ಶುಲ್ಕ ವಸೂಲಾಗುತ್ತಿದ್ದು, ಇದರಲ್ಲಿ ಹಿಂದಿನ ಸಾಲ ಮರುಪಾವತಿ ಮಾಡಿ ಮಾರ್ಚ್-ಎಪ್ರಿಲ್ ತಿಂಗಳ ವೇತನ ಪಾವತಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೋನ ವೈರಸ್‌ನಿಂದಾಗಿ ಶುಲ್ಕ ವಸೂಲಾತಿಯಾಗದೆ ವೇತನ ಕೊಡಲಾಗಿಲ್ಲ. ಕೆಲವು ಶಾಲೆಗಳು ಸಾಲ ಮಾಡಿ ಪಾವತಿ ಮಾಡಿರುತ್ತಾರೆ. ಮಾರ್ಚ್‌ವರೆಗೆ ಲಕ್ಷಾಂತರ ರೂಪಾಯಿ ಶುಲ್ಕ ಬಾಕಿಯಿದೆ. ಶಾಲೆ ಪ್ರಾರಂಭವಾದ ಬಳಿಕ ಹೊಸ ವರ್ಷದ ಶುಲ್ಕವನ್ನೂ ಪೋಷಕರು ಪಾವತಿಸ ಬೇಕಿದ್ದು,ಪ್ರಸಕ್ತ ವಾತಾವರಣದಲ್ಲಿ ಯಾವ ರೀತಿ ವಸೂಲಾಗಬಹುದೆಂಬ ಆತಂಕವಿದೆ. ಇದರಿಂದ ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿಗೆ ವೇತನವನ್ನು ನೀಡಲು ಕಷ್ಟವಾಗಲಿದೆ ಎಂದು ಅಸೋಶಿಯೇಶನ್ ಮನವಿಯಲ್ಲಿ ತಿಳಿಸಿದೆ.

ಶುಲ್ಕ ಬಾಕಿಯಿಟ್ಟು ಬೇರೆ ಶಾಲೆಗೆ ಮಕ್ಕಳನ್ನು ಸೇರಿಸಿದಾಗ ನಾವು ವರ್ಗಾವಣೆ ಪತ್ರವನ್ನು ಕಡ್ಡಾಯವಾಗಿ ಕೊಡಬೇಕಿದೆ. ಈ ಬಗ್ಗೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಮಾಡಬೇಕು. ನಿರಾಕ್ಷೇಪಣಾ ಪತ್ರವನ್ನು ಹಿಂದಿನ ಶಿಕ್ಷಣ ಸಂಸ್ಥೆಯಿಂದ ನೀಡಲು ಆದೇಶಿಸಬೇಕು. ಕೊರೋನ ಅವಧಿ ಮುಗಿದ ಬಳಿಕ ಶಿಕ್ಷಣ ಸಂಸ್ಥೆಗಳು ಪ್ರಾರಂಭಗೊಂಡಾಗ ಮಾರ್ಚ್‌ನಿಂದ ಶಾಲೆ ಪ್ರಾರಂಭವಾಗುವ ತನಕ ವೇತನ ವನ್ನು ನೀಡಲು ತಾತ್ಕಾಲಿಕ ವಾಗಿ ಸರಕಾರವು ಯೋಜನೆಗಳನ್ನು ನಿರೂಪಿಸಬೇಕು ಎಂದು ಅಸೋಸಿಯೇಶನ್ ಒತ್ತಾಯಿಸಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಬಂಡವಾಳವನ್ನು ಜಮೀನು ಖರೀದಿ, ಕಟ್ಟಡ ನಿರ್ಮಾಣ, ವಾಹನ-ಪೀಠೋಪಕರಣ ಖರೀದಿಗೆ ವಿನಿಯೋಗಿ ಸಿದೆ. ಹಾಗಾಗಿ ಖಾಸಗಿ ಆಂಗ್ಲ ಮಾಧ್ಯಮ ಆಡಳಿತ ಮಂಡಳಿಗೆ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಮಂಜೂರಿ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಎಸೋಸಿಯೇಶನ್‌ನ ಅಧ್ಯಕ್ಷ ವೈ. ಮುಹಮ್ಮದ್ ಬ್ಯಾರಿ, ಕಾರ್ಯದರ್ಶಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಕೋಶಾಧಿಕಾರಿ ಸವಣೂರು ಸೀತಾರಾಮ್ ರೈ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News