×
Ad

ಕೊರೋನ ಪೀಡಿತರ ಆರೈಕೆ ಮಾಡುವವರಿಗೆ ಆಕ್ಸಿಜನ್ ಬಬ್ಬಲ್ ಹೆಲ್ಮೆಟ್ !

Update: 2020-05-07 18:07 IST

ಮಂಗಳೂರು, ಮೇ 7: ಕೊರೋನ ವೈರಸ್ ಪೀಡಿತ ರೋಗಿಗಳು ಹಾಗು ಅವರನ್ನು ಬದುಕಿಸಲು ಹೋರಾಡುತ್ತಿರುವ ವೈದ್ಯರು, ದಾದಿಯರಿಗೆ ಪೂರಕವಾಗಿ ನಗರದ ಮಂಗಳಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗಣಪತಿ ಪಿ. ಅವರ ತಂಡ ಆಕ್ಸಿಜನ್ ಬಬ್ಬಲ್ ಹೆಲ್ಮೆಟ್ ರಚನೆ ಮಾಡಿದ್ದಾರೆ.

ಕೊರೋನ ಪೀಡಿತರ ಸಹಾಯಕ್ಕಾಗಿ ಸುಲಭವಾಗಿ ಕೈಗೆಟಕುವ ದರದಲ್ಲಿ ಇದನ್ನು ರಚಿಸಲಾಗಿದೆ. ತನ್ನೊಂದಿಗೆ ಸಹಾಯಕರಾಗಿ ಅನಿಲ್ ಸೋನ್ಸ್, ಕೃಷ್ಣದಾಸ್ ಕಾಮತ್, ಪೊಲೀಸ್ ಇಲಾಖೆಯವರು ಸಹಕರಿಸಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಗಣಪತಿ ಪಿ. ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೋಗಿಗಳ ಸಂಖ್ಯೆ ಏಕಕಾಲದಲ್ಲಿ ಏರಿಕೆಯಾದರೆ ಎಲ್ಲರಿಗೂ ವೆಂಟಿಲೇಟರ್ ಕಲ್ಪಿಸುವುದು ಕಷ್ಟ. ಆಗ ಆಕ್ಸಿಜನ್ ಹೆಲ್ಮೆಟ್ ಸಹಾಯಕವಾಗಲಿದೆ. ಇದು ಮಂಗಳಾ ಆಸ್ಪತ್ರೆಯ ವೈದ್ಯಾಧಿಕಾರಿಗಳ ಮೊದಲ ಶೋಧನೆಯಲ್ಲ. ಆದರೆ ಸ್ಥಳೀಯವಾಗಿ ಇಲ್ಲಿ ತಯಾರಿಸಿರುವುದು ಮೊದಲು ಎಂದು ಡಾ.ಗಣಪತಿ ಹೇಳಿದರು.

ಪ್ರಸ್ತುತ ಉಪಯೋಗಿಸುತ್ತಿರುವ ಆಕ್ಸಿಜನ್ ಮಾಸ್ಕ್ ಬದಲಿಯಾಗಿ ಈ ಆಕ್ಸಿಜನ್ ಹೆಲ್ಮಟ್ ಮಾಸ್ಕ್ ಸುಲಭವಾಗಿ ಉಪಯೋಗಿಸಬಹುದು. ಈ ಉಪಕರಣ ಬಳಕೆ ಸುಲಭ, ಕಡಿಮೆ ಖರ್ಚು, ಉಪಯೋಗಿಸುವಾಗ ಯಾವುದೇ ಅಡಚಣೆ ಆಗುವುದಿಲ್ಲ. ಮುಖ ಕವಚಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಕ್ಷಿತ. ಈ ಉಪಕರಣ ಧರಿಸಿ ಟಿವಿ ನೋಡಬಹುದು, ಪೇಪರ್ ಓದಬಹುದು. ಇದನ್ನು ವೆಂಟಿಲೇಟರ್ ಉಪಯೋಗಿಸಬೇಕಾಗಿ ಬರುವ ರೋಗಿಗಳಿಗೆ ಸುಲಭವಾಗಿ ಬಳಸಬಹುದು. ಈ ಉಪಕರಣಕ್ಕೆ ಪೇಟೆಂಟ್ ಪಡೆಯುಲು ಆಸ್ಪತ್ರೆ ಆಡಳಿತ ನಿರ್ಧರಿಸಿದೆ ಎಂದವರು ಹೇಳಿದರು.

ಕೊರೋನ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಹಾಗು ಸಿಬಂದಿಗೆ ವೈರಸ್ ಹರಡುವುದನ್ನು ತಪ್ಪಿಸಲು ಈ ಹೆಲ್ಮೆಟ್ ಸಹಕಾರಿಯಾಗಲಿದೆ. ರೋಗಿ ಹೆಲ್ಮಟ್ ಒಳಗೆ ಉಸಿರಾಟ ಮಾಡುವುದರಿಂದ ವೈರಸ್‌ಗಳು ಹೊರಗೆ ಬರುವುದಿಲ್ಲ. ಆದ್ದರಿಂದ ಈ ಹೆಲ್ಮೆಟ್ ಸುರಕ್ಷತೆ ಒದಗಿಸುತ್ತದೆ ಎಂದು ಡಾ.ಜಯಪ್ರಕಾಶ್ ಹೇಳಿದರು.

ಈ ಹೆಲ್ಮೆಟ್ ಸ್ಥಳೀಯವಾಗಿ ತಯಾರಿಸಲಾಗಿದೆ. ಪಾರದರ್ಶಕ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್, ಎರಡು ರಿಂಗ್, ಗಮ್, ಉತ್ತಮ ಗುಣಮಟ್ಟದ ರಬ್ಬರ್ ಬಳಸಿ ಹೆಲ್ಮೆಟ್ ತಯಾರಿಸಲಾಗಿದೆ. ಕಡಿಮೆ ದರ, ಹೆಚ್ಚಿನ ಉತ್ಪಾದನೆ, ಗರಿಷ್ಠ ಜೀವ ರಕ್ಷಣೆ ಸಾಧ್ಯವಾಗಲಿದೆ ಎಂದು ಡಾ.ಹರ್ಷ ತಿಳಿಸಿದರು.

ಆಸ್ಪತ್ರೆತಯ ನಿರ್ದೇಶಕಿ ಡಾ.ಅನಿತಾ ಜಿ ಭಟ್, ವೈದ್ಯ ಡಾ.ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News