ಮರ ಕಡಿಯದೇ ಕದ್ರಿ ಪಾರ್ಕ್ ಎದುರು ಸ್ಮಾರ್ಟ್ ರಸ್ತೆ ನಿರ್ಮಾಣ: ಶಾಸಕ ಕಾಮತ್
ಮಂಗಳೂರು, ಮೇ 7: ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಕದ್ರಿ ಪಾರ್ಕ್, ಸಂಗೀತ ಕಾರಂಜಿ ಪ್ರದೇಶವನ್ನು ಜನಾಕರ್ಷಣೆಯ ತಾಣವಾಗಿಸುವ ನಿಟ್ಟಿನಲ್ಲಿ ಪಾರ್ಕ್‌ನ ಮುಂಭಾಗದ ರಸ್ತೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ‘ಸ್ಮಾರ್ಟ್ ರೋಡ್’ ಆಗಿ ಅಭಿವೃದ್ಧಿಪಡಿಸಲು ಈಗಾಗಲೇ ನಿರ್ಧರಿಸಲಾಗಿದೆ. ಇಂದು ಇಲ್ಲಿ ಕಾಮಗಾರಿ ಆರಂಭಗೊಂಡಿದ್ದು, ರಸ್ತೆ ಅಗಲೀಕರಣಕ್ಕಾಗಿ ಇಲ್ಲಿರುವ ಯಾವುದೇ ಮರಗಳನ್ನು ಕಡಿಯದೆ ವಿನೂತನ ರೀತಿಯಲ್ಲಿ ರಸ್ತೆ ನಿರ್ಮಾಣವಾಗಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಕದ್ರಿ ಪಾರ್ಕ್ ಮುಂಭಾಗ ಒಟ್ಟು 12 ಕೋ.ರೂ. ವೆಚ್ಚದಲ್ಲಿ ಸ್ಮಾರ್ಟ್‌ರೋಡ್ ಯೋಜನೆ ನಡೆಯಲಿದೆ. ಇದಕ್ಕಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ. ಸರ್ಕಿಟ್‌ಹೌಸ್ ಜಂಕ್ಷನ್‌ನಿಂದ ಪದುವ ಹೈಸ್ಕೂಲ್‌ವರೆಗಿನ ಒಟ್ಟು 780 ಮೀ ಉದ್ದದ ರಸ್ತೆ ಸ್ಮಾರ್ಟ್ ಮಾದರಿ ಯಲ್ಲಿ ರೂಪುಗೊಳ್ಳಲಿದೆ. 11 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇಂದು ಕಾಮಗಾರಿ ಆರಂಭಗೊಳ್ಳುತ್ತಿರುವಂತೆಯೇ, ಇಲ್ಲಿರುವ ಮರಗಳನ್ನು ಕಡಿಯುವ ಕುರಿತು ಅನುಮಾನಗೊಂಡು ಪರಿಸರಾಸಕ್ತರು ಜಮಾಯಿಸಿದ್ದರು.
ಈ ನಡುವೆ, ಶಾಸಕ ವೇದವ್ಯಾಸ ಕಾಮತ್‌ರವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್ ಹಾಗೂ ಮೇಯರ್ ದಿವಾಕರ್ ಪಾಂಡೇಶ್ವರ ಅವರು ಬುಧವಾರ ಕಾಮಗಾರಿ ನಡೆಯಲಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
‘ಇರುವ ರಸ್ತೆ ಸ್ವಲ್ಪ ಅಗಲೀಕರಣಗೊಳಿಸಿ ಸುಂದರವಾಗಿ ರೂಪ ಪಡೆಯಲಿದೆ. ರಸ್ತೆಯ ಮಧ್ಯ ಭಾಗದಲ್ಲಿ ಆಕರ್ಷಕ ಹಾಗೂ ಮನ ಸೆಳೆಯುವ ಗಾರ್ಡನಿಂಗ್ ಮಾಡಲಾಗುತ್ತದೆ. ಈ ರಸ್ತೆಯ ಕೇಬಲ್‌ಗಳೆಲ್ಲ ಮಣ್ಣಿನ ಕೆಳಭಾಗದಲ್ಲಿ ಸಾಗಲಿದೆ. ಎಲ್ಲ ವಯರ್‌ಗಳು ಅಂಡರ್‌ಗ್ರೌಂಡ್‌ನಲ್ಲಿರಲಿದೆ. ಎಲ್ಲೂ ಕೂಡ ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳಲು ಸುಸಜ್ಜಿತ ಸೆಂಟ್ರಲ್ ಕಮಾಂಡ್ ಸೆಂಟರ್ ಕಾರ್ಯಾಚರಿಸಲಿದೆ. ಸ್ಮಾರ್ಟ್ ರೋಡ್‌ನಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಅಳವಡಿಸಿ ಕಸದ ತೊಟ್ಟಿ, ಸ್ವಯಂಚಾಲಿತ ತ್ಯಾಜ್ಯ ನಿರ್ವಹಣಾ ವಾಹನ, ಇ-ಟಾಯ್ಲೆಟ್, ಸಿಸಿಕ್ಯಾಮರಾ ಅಳವಡಿಸಿದ ಟ್ರಾಫಿಕ್ ವ್ಯವಸ್ಥೆ, ಬಸ್ ಟ್ರ್ಯಾಕಿಂಗ್ ವ್ಯವಸ್ಥೆ, ವೈ ಕೇಂದ್ರ, ಮಾಹಿತಿ ಬೋರ್ಡ್, ವಾಕ್ ವೇ ವ್ಯವಸ್ಥೆ ಇರಲಿದೆ. ರಸ್ತೆ ಅಕ್ಕ ಪಕ್ಕ ಹಸಿರ ಹೊದಿಕೆ, ಎಲ್‌ಇಡಿ, ಸ್ಮಾರ್ಟ್ ಬಸ್ ನಿಲ್ದಾಣ, ಕಿಯೋಸ್ಕ್ ಸೆಂಟರ್‌ಗಳು, ಬಸ್ಸು, ವಿಮಾನ, ರೈಲಿನ ಸಮಯದ ವಿವರ ಸೇರಿದಂತೆ ಎಲ್ಲವೂ ಹೈ ೈ ರೀತಿಯಲ್ಲಿ ದೊರೆಯಲಿದೆ. ರಸ್ತೆಯ ಎರಡೂ ಬದಿಯಲ್ಲಿ ಸುಸಜ್ಜಿತ ಹಾಗೂ ಆಕರ್ಷಕ ಶೈಲಿಯಲ್ಲಿ ಅಂಗಡಿ, ಮಳಿಗೆಗಳನ್ನು ನಿರ್ಮಿಸಿ ಕೊಡಲಾಗುತ್ತದೆ’ ಎಂದು ಹೇಳಿದ್ದಾರೆ.
ಶಾಸಕ ವೇದವ್ಯಾಸ್ ಕಾಮತ್‌ರವರು ಕದ್ರಿ ಪಾರ್ಕ್‌ಗೆ ಭೇಟಿ ನೀಡಿದ ವೇಳೆ ಮನಪಾ ಮೇಯರ್ ದಿವಾಕರ್, ಉಪ ಮೇಯರ್ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶರತ್ ಕುಮಾರ್, ಕಿರಣ್ ಕುಮಾರ್, ಪೂರ್ಣಿಮಾ, ಜಗತೀಶ್ ಶೆಟ್ಟ, ಸದಸ್ಯರಾದ ಶಕಿಲ ಕಾವ, ಮನೋಹರ್ ಕದ್ರಿ, ಸುಧೀರ್ ಶೆಟ್ಟಿ, ಸ್ಮಾರ್ಟ್ ಸಿಟಿ ಯೋಜನೆಯ ಆಡಳಿತ ನಿರ್ದೇಶಕ ನಝೀರ್, ಅಧಿಕಾರಿಗಳಾದ ಲಿಂಗೇಗೌಡ, ರವಿಕುಮಾರ್, ಆರ್ಕಿಟೆಕ್ಟ್ ವೆಂಕಟೇಶ್ ಪೈ, ಗುತ್ತಿಗೆದಾ ರಾಮಾ ಕಾಮತ್ ಉಪಸ್ಥಿತರಿದ್ದರು.