ಉಡುಪಿಯಿಂದ 7,200ಕ್ಕೂ ಅಧಿಕ ವಲಸೆ ಕಾರ್ಮಿಕರ ಉಚಿತ ಪ್ರಯಾಣ
ಉಡುಪಿ, ಮೇ 7: ಕಳೆದ 13 ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ನೆಲೆಸಿದ್ದ ವಿವಿಧ ಜಿಲ್ಲೆಗಳ ಒಟ್ಟು 7200ಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ತಮ್ಮ ತಮ್ಮ ಊರಿಗೆ ಕಳುಹಿಸಿಕೊಡಲಾಗಿದೆ.
ಉಚಿತ ಬಸ್ ವ್ಯವಸ್ಥೆಯ ಕೊನೆಯ ದಿನವಾದ ಬುಧವಾರ ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು 23 ಬಸ್‌ಗಳಲ್ಲಿ ಒಂದು ಬಸ್‌ಗಳಲ್ಲಿ 30ರಂತೆ ಒಟ್ಟು 750 ಮಂದಿ ತಮ್ಮ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎ.25ರಿಂದ ಮೇ 6ರವರೆಗೆ ಉಡುಪಿ ಜಿಲ್ಲೆಯಿಂದ ಒಟ್ಟು 168 ಬಸ್ ಗಳಲ್ಲಿ ಬಾಗಲಕೋಟೆ ಜಿಲ್ಲೆಗೆ 2304, ಕೊಪ್ಪಳ- 865, ಬೆಂಗಳೂರು- 779, ಹಾವೇರಿ- 346, ಬಿಜಾಪುರ- 470, ಗದಗ- 309, ಬಳ್ಳಾರಿ- 392, ರಾಯಚೂರು- 203 ಸೇರಿದಂತೆ ಒಟ್ಟು ರಾಜ್ಯದ 23 ಜಿಲ್ಲೆಗಳಿಗೆ ಒಟ್ಟು 6551 ಮಂದಿ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ.
ಉಡುಪಿ ತಾಲೂಕಿನಿಂದ 3357, ಬ್ರಹ್ಮಾವರ- 1007, ಕುಂದಾಪುರ- 737, ಬೈಂದೂರು- 169, ಕಾಪು- 656, ಕಾರ್ಕಳ- 554, ಹೆಬ್ರಿ- 71 ಮಂದಿ ವಲಸೆ ಕಾರ್ಮಿಕರು ತೆರಳಿದ್ದಾರೆ ಎಂದು ಕುಂದಾಪುರ ಎಸಿ ಕಚೇರಿಯ ಮೂಲಗಳು ತಿಳಿಸಿವೆ.