×
Ad

ಅನುಮತಿ ಇಲ್ಲದೆ ಅಕ್ರಮ ಪ್ರವೇಶ: ಸ್ಥಳೀಯರಿಂದ ತೀವ್ರ ವಿರೋಧ

Update: 2020-05-07 18:40 IST

ಗಂಗೊಳ್ಳಿ, ಮೇ 7: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಯಾವುದೇ ಅನುಮತಿ ಇಲ್ಲದೆ ಲಂಗರು ಹಾಕಲು ಭಟ್ಕಳದಿಂದ ಬಂದ ಎಂಟು ಪರ್ಸಿನ್ ಬೋಟುಗಳನ್ನು ಗಂಗೊಳ್ಳಿ ಮೀನುಗಾರಿಕಾ ಇಲಾಖಾಧಿಕಾರಿಗಳು ವಾಪಾಸ್ಸು ಕಳುಹಿಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಭಟ್ಕಳದ ಮೀನುಗಾರರು ಅಲ್ಲಿನ ಬಂದರಿನಲ್ಲಿ ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಪ್ರತಿವರ್ಷ ತಮ್ಮ ಬೋಟುಗಳನ್ನು ಮಳೆಗಾಲದ ರಜೆಯಲ್ಲಿ ಗಂಗೊಳ್ಳಿ ಬಂದರಿನಲ್ಲಿ ಲಂಗರು ಹಾಕುತ್ತಿದ್ದರೆನ್ನಲಾಗಿದೆ. ಅದರಂತೆ ಇಂದು ಬೆಳಗ್ಗೆ 10:30ರ ಸುಮಾರಿಗೆ ಎಂಟು ಬೋಟುಗಳಲ್ಲಿ ಒಟ್ಟು 21 ಮಂದಿ ಮೀನುಗಾರರು ಬಂದರಿನ ಮ್ಯಾಂಗನೀಸ್ ವರ್ಫ್‌ಗೆ ಬಂದಿದ್ದರು.

ಈ ಬಗ್ಗೆ ಮಾಹಿತಿ ತಿಳಿದ ನೂರಾರು ಸಂಖ್ಯೆಯ ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಹೊರಜಿಲ್ಲೆಯ ಬೋಟು ಗಳನ್ನು ನಿಲ್ಲಿಸಲು ವಿರೋಧ ವ್ಯಕ್ತಪಡಿಸಿದರು. ಕೊರೋನ ವೈರಸ್‌ಗೆ ಸಂಬಂಧಿಸಿ ಕೆಂಪು ವಲಯದಲ್ಲಿರುವ ಭಟ್ಕಳದಿಂದ ಯಾವುದೇ ಅನುಮತಿ ಇಲ್ಲದೆ ಬಂದಿ ರುವ ಮೀನುಗಾರರೊಂದಿಗೆ ಸ್ಥಳೀಯರು ವಾಗ್ವಾದಕ್ಕೆ ಇಳಿದರು.

ಕೊರೋನ ಹರಡುವ ಭೀತಿ ವ್ಯಕ್ತಪಡಿಸಿದ ಸ್ಥಳೀಯರು, ಯಾವುದೇ ಕಾರಣಕ್ಕೂ ಇಲ್ಲಿ ಬೋಟುಗಳನ್ನು ನಿಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಬಂದರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣ ವಾಯಿತು. ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

ಈ ಕುರಿತು ಮೀನುಗಾರಿಕಾ ಇಲಾಖೆ ಹಾಗೂ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕಿ ಅಂಜನಾದೇವಿ ಹಾಗೂ ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಪೊಲೀಸ್ ಉಪನಿರೀಕ್ಷಕ ಸಂದೀಪ್ ಎಲ್ಲ ಬೋಟುಗಳನ್ನು ಪರಿಶೀಲಿಸಿ, ಮೀನುಗಾರರನ್ನು ವಿಚಾರಿಸಿದರು.

ಕೊರೋನ ಭೀತಿಯ ಹಿನ್ನೆಲೆಯಲ್ಲಿ ಹೊರಜಿಲ್ಲೆಯಿಂದ ಯಾವುದೇ ಬೋಟುಗಳು ಜಿಲ್ಲಾಡಳಿತದ ಅನುಮತಿ ಇಲ್ಲದೆ ಜಿಲ್ಲೆಯ ಯಾವುದೇ ಬಂದರುಗಳಿಗೆ ಬರಲು ಅವಕಾಶ ಇಲ್ಲದಿರುವುದರಿಂದ ಅನುಮತಿ ಪತ್ರಗಳಿಲ್ಲದ ಈ ಎಲ್ಲ ಬೋಟುಗಳನ್ನು ಮೀನುಗಾರಿಕಾ ಇಲಾಖಾಧಿಕಾರಿಗಳ ನಿರ್ದೇಶನದಂತೆ ಕರಾವಳಿ ಕಾವಲು ಪಡೆಯ ಪೊಲೀಸರು ಮಧ್ಯಾಹ್ನ 12:30ರ ಸುಮಾರಿಗೆ ಗಂಗೊಳ್ಳಿ ಬಂದರಿನಿಂದ ವಾಪಾಸ್ಸು ಭಟ್ಕಳಕ್ಕೆ ಕಳುಹಿಸಿದರು.

ಆರೋಗ್ಯ ತಪಾಸಣೆ ಮಾಡದೆ ಮತ್ತು ಯಾವುದೇ ಅನುಮತಿ ಪತ್ರ ಇಲ್ಲದೆ ಜಿಲ್ಲೆಯ ಒಳಗೆ ಪ್ರವೇಶಿಸಿದ ಭಟ್ಕಳದ ಬೋಟುಗಳನ್ನು ಗಂಗೊಳ್ಳಿ ಬಂದರಿ ನಲ್ಲಿ ಲಂಗರು ಹಾಕಲು ಅವಕಾಶ ನೀಡದೆ ವಾಪಾಸ್ಸು ಕಳುಹಿಸಲಾಗಿದೆ. ಸ್ಥಳೀಯರು ಈ ಬಗ್ಗೆ ಗಮನಕ್ಕೆ ತಂದ ತಕ್ಷಣ ಆರೋಗ್ಯ ಅಧಿ ಕಾರಿಗಳಿಗೆ ಮಾಹಿತಿ ನೀಡಿದೆ. ಅವರು ಕೂಡ ಹೊರಜಿಲ್ಲೆಯ ಬೋಟುಗಳನ್ನು ನಿಲ್ಲಿಸಲು ಅವಕಾಶ ನೀಡಬಾರದು ಎಂದು ಸೂಚನೆ ನೀಡಿ ದರು. ಅದೇ ರೀತಿ ಸ್ಥಳೀಯರು ಕೂಡ ಈ ಬಗ್ಗೆ ಭೀತಿ ವ್ಯಕ್ತಪಡಿಸಿದ್ದರು. ಎಲ್ಲ ಎಂಟು ಬೋಟುಗಳನ್ನು ಮತ್ತು ಅದರಲ್ಲಿದ್ದ 21 ಮೀನುಗಾರರನ್ನು ವಿಚಾರಿಸಿ ಹಿಂದೆ ಕಳುಹಿಸಿದ್ದೇವೆ.
-ಅಂಜನಾದೇವಿ, ಉಪನಿರ್ದೇಶಕಿ, ಮೀನುಗಾರಿಕಾ ಇಲಾಖೆ, ಗಂಗೊಳ್ಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News