'ಚೆಕ್‌ಮೇಟ್ ಕೋವಿಡ್' ಚೆಸ್‌ನಿಂದ ಸಿಎಂ ಪರಿಹಾರ ನಿಧಿಗೆ 15ಲಕ್ಷ ರೂ.
ಉಡುಪಿ, ಮೇ 7: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ ಮತ್ತು ಮೊಬೈಲ್ ಪ್ರಿಮಿಯರ್ ಲೀಗ್ (ಎಂಪಿಎಲ್) ಆಶ್ರಯದಲ್ಲಿ ಆಯೋಜಿಸಿದ್ದ ಚೆಕ್‌ಮೇಟ್ ಕೋವಿಡ್ ಚೆಸ್ ಟೂರ್ನಿಯ ಮೂಲಕ ಸಂಗ್ರಹಿಸಲಾದ 15 ಲಕ್ಷ ರೂ. ಗಳ ಮೊತ್ತವನ್ನು ಕರ್ನಾಟಕ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ನೀಡಲಾಗಿದೆ. 10 ಲಕ್ಷ ರೂ. ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ಒಟ್ಟು 19,245 ಆಟಗಾರರು ನೋಂದಾಯಿಸಿಕೊಂಡಿದ್ದರು.
ಎಂಪಿಎಲ್ ಆ್ಯಪ್‌ನಲ್ಲಿ ಮೇ 2 ಹಾಗೂ 3ರಂದು ನಡೆದ ಟೂರ್ನಿಯಲ್ಲಿ ಚೆಸ್ ಗ್ರಾಂಡ್‌ಮಾಸ್ಟರ್ ಅಂಕಿತ್ ರಜಪಾರ ಪ್ರಶಸ್ತಿ ಗೆದ್ದು ಒಂದು ಲಕ್ಷ ರೂ. ನಗದು ಬಹುಮಾನ ಗೆದ್ದುಕೊಂಡರು. ಗ್ರಾಂಡ್‌ಮಾಸ್ಟರ್ ಭಕ್ತಿ ಕುಲಕರ್ಣಿ ಅಗ್ರ ಸ್ಥಾನದ ಮಹಿಳಾ ಆಟಗಾರ್ತಿ ಪ್ರಶಸ್ತಿ ಪಡೆದರೆ, 60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಶಕುಂತಲಾ ದೇವಿ ಅಗ್ರಸ್ಥಾನ ಪಡೆದು ತಲಾ 25 ಸಾವಿರ ರೂ.ಗಳ ನಗದು ಬಹುಮಾನ ಗೆದ್ದುಕೊಂಡರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆ ಸಚಿವ ಸಿ.ಟಿ.ರವಿ ಮತ್ತು ಎಂಪಿಎಲ್ ಸಹಸಂಸ್ಥಾಪಕ ಮತ್ತು ಸಿಇಓ ಸಾಯಿ ಶ್ರೀನಿವಾಸ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟೂರ್ನಿಯಲ್ಲಿ ಒಟ್ಟು 2.37 ಲಕ್ಷ ಚೆಸ್ ಆಟಗಳನ್ನು ಎಂಪಿಎಲ್ ಆ್ಯಪ್ ಮೂಲಕ ಆಡಲಾಯಿತು. ಟೂರ್ನಿಯ ಲೀಡರ್ ಬೋರ್ಡಿನಲ್ಲಿ 10,000 ರ್ಯಾಂಕಿಂಗ್‌ವರೆಗೆ ರ್ಯಾಂಕ್ ಪಡೆದ ಎಲ್ಲರಿಗೂ ಬಹುಮಾನ ನಿಧಿಯಿಂದ ನಗದು ಬಹುಮಾನಗಳನ್ನು ನೀಡಲಾಯಿತು ಎಂದು ಪ್ರಕಟಣೆ ಹೇಳಿದೆ.