×
Ad

ಜಿಲ್ಲಾ ಕಾಂಗ್ರೆಸ್‌ನಿಂದ ನಿಸಾರ್, ವಿನ್ನಿಫ್ರೆಡ್‌ಗೆ ನುಡಿ ನಮನ

Update: 2020-05-07 19:37 IST

ಉಡುಪಿ, ಮೇ 7: ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಹಿರಿಯ ರಾಜಕಾರಿಣಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಅವರ ನಿಧನ ಕ್ಷೇತ್ರಕ್ಕೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡ ಕುಂದಾಪುರ ಮಾಜಿ ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಹಾಗೂ ಕವಿ ಕೆ.ಎಸ್. ನಿಸಾರ್ ಅಹಮ್ಮದ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಪ್ರಾಧ್ಯಾಪಕರಾಗಿ ವೃತ್ತಿ ಜೀವನ ನಡೆಸುತ್ತಿದ್ದ ಕವಿ ಕೆ.ಎಸ್.ನಿಸಾರ್ ಅಹಮದ್ ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ತನ್ನದಾಗಿಸಿ ಕೊಂಡವರು. ಸುಗಮ ಸಂಗೀತ ಕ್ಷೇತ್ರದಲ್ಲಿ ಅವರ ರಚನೆಯ ಗೀತೆಗಳು ಅಪಾರ ಯಶಸ್ಸನ್ನು ಪಡೆದು ಅವರಿಗೆ ಜನ ಮನ್ನೆಯನ್ನೂ ತಂದುಕೊಟ್ಟವು ಎಂದರು.

ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ರಾಜ್ಯ ಮುಖಂಡ ಎಂ.ಎ. ಗಫೂರ್ ಮಾತನಾಡಿ, ಹಿರಿಯ ರಾಜಕಾರಿಣಿಯಾಗಿದ್ದ ವಿನ್ನಿಫ್ರೆಡ್ ಫೆರ್ನಾಂಡಿಸ್ ಅವರು ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ನೇರ ದಿಟ್ಟ ನುಡಿಯ ಪ್ರಾಮಾಣಿಕತೆ ರಾಜಕಾರಿಣಿಯಾಗಿ ಅವರು ಕುಂದಾಪುರ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡರು ಎಂದರು. ಇದರೊಂದಿಗೆ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮ್ಮದ್‌ರಿಗೂ ನುಡಿನಮನ ಸಲ್ಲಿಸಿದರು.

ಸಭೆಯಲ್ಲಿ ಪಕ್ಷದ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರೀಶ್ ಶೆಟ್ಟಿ ಪಾಂಗಾಳ, ಕುಶಲ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ಕೀರ್ತಿ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ಯತೀಶ್ ಕರ್ಕೇರ, ಮಹಾಬಲ ಕುಂದರ್, ಹಬೀಬ್ ಅಲಿ, ಶ್ಯಾಮಲ ಸುಧಾಕರ್, ಶ್ರೀನಿವಾಸ ಹೆಬ್ಬಾರ್, ಉಪೇಂದ್ರ ಗಾಣಿಗ, ರಾಜು, ಗಣೇಶ್, ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿ ಪ್ರಖ್ಯಾತ್ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News