'ಮಸೀದಿಯಲ್ಲಿ ನಮಾಝ್’ ಎಂದು ಸುಳ್ಳು ಸುದ್ದಿ ಹರಡಿದ ಆರೋಪ: ನ್ಯೂಸ್ 18ನ ಅಮಿಶ್ ದೇವ್ ಗನ್ ವಿರುದ್ಧ ಪ್ರಕರಣ
Update: 2020-05-07 20:04 IST
ಹೊಸದಿಲ್ಲಿ: ಲಾಕ್ ಡೌನ್ ಸಂದರ್ಭ ಕುರ್ಲಾ ಮಸೀದಿಯಲ್ಲಿ ಮುಸ್ಲಿಮರು ನಮಾಝ್ ಮಾಡುತ್ತಿದ್ದರು, ಮಸೀದಿಗಳಲ್ಲಿ ಸೇರಿದ್ದರು ಮತ್ತು ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಸುಳ್ಳನ್ನು ಹರಡಿದ ಆರೋಪದಲ್ಲಿ ಟಿವಿ18 ನ್ಯೂಸ್ ನ ಅಮಿಶ್ ದೇವ್ ಗನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಶಹಝಾದ್ ಖಾನ್ ಎಂಬವರು ಅಮಿಶ್ ವಿರುದ್ಧ ದೂರು ನೀಡಿದ್ದಾರೆ.
“ಕುರ್ಲಾದಿಂದ ದೊಡ್ಡ ಸುದ್ದಿಯೊಂದು ಬರುತ್ತಿದೆ. ನಮಾಝ್ ಮಾಡಿದ ನಂತರ ದೊಡ್ಡ ಗುಂಪೊಂದು ಮಸೀದಿಯಲ್ಲಿ ಸೇರಿದೆ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಅವರ ಜೊತೆ ಕೆಟ್ಟದಾಗಿ ವರ್ತಿಸಲಾಗಿದೆ” ಎಂದು ತಮ್ಮ ‘ಆರ್ ಪಾರ್’ ಕಾರ್ಯಕ್ರಮದಲ್ಲಿ ಅಮಿಶ್ ಹೇಳಿದ್ದರು ಎಂದು ಶಹಝಾದ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆ ಶುಕ್ರವಾರ ನಡೆದಿರಲಿಲ್ಲ. ಅಮಿಶ್ ಮತ್ತು ಅವರ ಚಾನೆಲ್ ಆರೋಪಿಸಿದಂತೆ ಅಲ್ಲಿ ನಮಾಝ್ ನಡೆದಿರಲಿಲ್ಲ. ಪೊಲೀಸರ ಜೊತೆ ಕೆಟ್ಟದಾಗಿ ವರ್ತಿಸಿರಲಿಲ್ಲ ಎಂದು ಶಹಝಾದ್ ತಿಳಿಸಿದ್ದಾರೆ.