ಮುಂಬಯಿ ಭಾಗದ ಜನರಿಗೆ ಉಡುಪಿ ಜಿಲ್ಲೆಗೆ ಬರಲು ಅನುಮತಿ
ಉಡುಪಿ, ಮೇ 7: ಮಹಾರಾಷ್ಟ್ರದ ಮುಂಬಯಿ ಹಾಗೂ ಇತರ ಭಾಗಗಳಲ್ಲಿ ನೆಲೆಸಿರುವ ಉಡುಪಿ ಜಿಲ್ಲೆಯ ಕಾರ್ಮಿಕರು ಹಾಗೂ ಇತರರು ಅವರಾಗಿಯೇ ತಮ್ಮ ತಮ್ಮ ವಾಹನಗಳಲ್ಲಿ ಜಿಲ್ಲೆಗೆ ಬರಲು ಇಚ್ಛಿಸಿದಲ್ಲಿ ಮತ್ತು ಪ್ರತ್ಯೇಕವಾಗಿ ಸರಕಾರಿ ಕ್ವಾರಂಟೈನ್‌ನಲ್ಲಿ ಉಳಿಯಲು ಒಪ್ಪಿಗೆ ಸೂಚಿಸಿದಲ್ಲಿ ಅವರಿಗೆ ಜಿಲ್ಲೆಗೆ ಬರಲು ಒಪ್ಪಿಗೆ ನೀಡಿ, ಸೂಕ್ತ ವ್ಯವಸ್ಥೆ ಕಲ್ಪಿಸಲು ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಸಂಜೆ ಈ ಸಭೆ ನಡೆಯಿತು. ಇದಕ್ಕಾಗಿ ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗಳ ಅನುಮತಿಯನ್ನೂ ಪಡೆದುಕೊಳ್ಳಲಾಗಿದೆ ಎಂದು ಸಂಸದೆ ಸಭೆಗೆ ತಿಳಿಸಿದರು.
ಹೊರರಾಜ್ಯಗಳಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಸೇವಾಸಿಂಧು ಮೂಲಕ ಆನ್‌ಲೈನ್‌ನಲ್ಲಿ ನೊಂದಾವಣಿ ಮಾಡಿಕೊಳ್ಳುವಂತೆ ಅವರು ನುಡಿದರು.
ಸಭೆಯಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ ಜಿ.ಜಗದೀಶ್, ಸಿಇಓ ಪ್ರೀತಿ ಗೆಹ್ಲೋಟ್, ಎಸ್ಪಿ ವಿಷ್ಣುವರ್ಧನ್, ಎಡಿಸಿ ಸದಾಶಿವ ಪ್ರಭು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.