ಸೇವಾ ಸಿಂಧುವಿನಂತೆ ಅಂತಾರಾಷ್ಟ್ರೀಯ ಕನ್ನಡಿಗರಿಗೂ ಆ್ಯಪ್ ಮಾಡಿ: ರಾಜ್ಯ ಸರಕಾರಕ್ಕೆ ಶಾಸಕ ಯು.ಟಿ.ಖಾದರ್ ಸಲಹೆ

Update: 2020-05-08 11:46 GMT

ಮಂಗಳೂರು, ಮೇ 8: ವಿದೇಶಗಳಲ್ಲಿರುವ ಕನ್ನಡಿಗರನ್ನು ರಾಜ್ಯಕ್ಕೆ ವಾಪಾಸು ಕರೆಸಿಕೊಳ್ಳುವ ಬಗ್ಗೆ ಸರಕಾರಕ್ಕೆ ಯಾವುದೇ ಸ್ಪಷ್ಟತೆ ಇಲ್ಲ. ಯಾವಾಗ, ಎಷ್ಟು ವಿಮಾನಗಳಲ್ಲಿ ವಿದೇಶದಲ್ಲಿ ಅತಂತ್ರವಾಗಿರುವ ಕನ್ನಡಿಗರು ಬರಲಿದ್ದಾರೆಂಬ ಮಾಹಿತಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನೋಡಲ್ ಅಧಿಕಾರಿಗಳಿಗೂ ಇಲ್ಲ ಎಂದು ಶಾಸಕ ಯು.ಟಿ.ಖಾದರ್ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನೆರೆಯ ಕೇರಳ ರಾಜ್ಯದಲ್ಲಿ ಈಗಾಗಲೇ ವಿಮಾನ ಬಂದಿಳಿಯಲಾರಂಭಿಸಿದೆ. ಕರ್ನಾಟಕಕ್ಕೆ ಮೇ 12ಕ್ಕೆ ಬರಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕೇಳಿದರೆ ಅವರಿಗೆ ಮಾಹಿತಿ ಇಲ್ಲ. ಇದೀಗ ವಿದೇಶಗಳಿಂದ ಆತಂಕಕ್ಕೀಡಾಗಿರುವ ಕನ್ನಡಿಗರು ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಸರಕಾರ ಹೊರ ರಾಜ್ಯ, ಜಿಲ್ಲೆಗಳಿಗೆ ತೆರಳುವವರಿಗೆ ಸೇವಾ ಸಿಂಧು ಆ್ಯಪ್ ಮಾಡಿರುವಂತೆ ವಿದೇಶಗಳಲ್ಲಿರುವ ಕನ್ನಡಿಗರಿಗೂ ನೋಂದಣಿಗೆ ಅವಕಾಶ ನೀಡಿದರೆ ಅವರ ಗೊಂದಲ ಪರಿಹಾರವಾಗಲಿದೆ ಎಂದು ಹೇಳಿದರು.

'ಅಸಂಘಟಿತ ಕಾರ್ಮಿಕರಿಗೂ ಪ್ಯಾಕೇಜ್ ನೀಡಿ'
ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟದ ಸಂದರ್ಭ ಎಲ್ಲಾ ವರ್ಗದ ಜನರೂ ರಾಜ್ಯದೊಂದಿಗೆ ಸಹಕಾರಿಸಿದ್ದಾರೆ. ಈ ನಡುವೆ ದುಡಿಯುವ ವರ್ಗಕ್ಕೆ ಪ್ಯಾಕೇಜ್ ನೀಡುವಂತೆ ವಿಧಾನಸಭೆಯಲ್ಲಿ ಒತ್ತಾಯಿಸಲಾಗಿತ್ತು. ಅದರಂತೆ ರಿಕ್ಷಾ ಚಾಲಕರು, ಕ್ಷೌರಿಕರು ಸೇರಿದಂತೆ ಕೆಲ ದುಡಿಯುವ ವರ್ಗಕ್ಕೆ ಪ್ಯಾಕೇಜನ್ನು ಸರಕಾರ ಪ್ರಕಟಿಸುವುದು ಅಭಿನಂದನೀಯ. ಇದೇ ವೇಳೆ ದ.ಕ. ಜಿಲ್ಲೆಯ ಕಾರ್ಮಿಕ ವರ್ಗವಾದ ಬೀಡಿ ಕಾರ್ಮಿಕರು, ಹೊಟೇಲ್ ಕಾರ್ಮಿಕರು, ಬಸ್ಸಿನ ಚಾಲಕ ನಿರ್ವಾಹಕರು, ಬೀದಿ ಬದಿ ವ್ಯಾಪಾರಿಗಳು, ಫೋಟೋ ಗ್ರಾಫರ್‌ಗಳನ್ನೂ ಸರಕಾರ ಗಣನೆಗೆ ತೆಗೆದುಕೊಳ್ಳಬೇಕು ಎಂದು ಯು.ಟಿ.ಖಾದರ್ ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಜಿಲ್ಲೆಯಲ್ಲಿ ನೋಂದಣಿಯಾದ 1.97 ಲಕ್ಷ ಬೀಡಿ ಕಾರ್ಮಿಕರಿದ್ದಾರೆ. ಉಡುಪಿಯಲ್ಲೂ ಸುಮಾರು 35 ಸಾವಿರದಷ್ಟಿದ್ದಾರೆ. ಅವರೆಲ್ಲರಿಗೂ ಪ್ಯಾಕೇಜ್ ನೀಡುವ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಎಐಟಿಯುಸಿಯ ಎಚ್.ವಿ. ರಾವ್, ಕರುಣಾಕರ್, ಸಿಐಟಿಯುನ ಜೆ. ಬಾಲಕೃಷ್ಣ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

ರಾಜ್ಯ ಸರಕಾರದಿಂದ ಮಾನವ ಹಕ್ಕಿನ ಉಲ್ಲಂಘನೆ: ಖಾದರ್
ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿ ತಮ್ಮ ಊರುಗಳಿಗೆ ತೆರಳಲು ಸಿದ್ಧವಾಗಿರುವ ಕಾರ್ಮಿಕರನ್ನು ಬಿಲ್ಡರ್‌ಗಳ ಮಾತಿಗೆ ಮಣಿದು ಅವರನ್ನು ಇಲ್ಲೇ ಇರಿಸಿ ದುಡಿಸಿಕೊಳ್ಳಲು ರಾಜ್ಯ ಸರಕಾರ ಮುಂದಾಗಿರುವುದು ಮಾನವ ಹಕ್ಕಿನ ಉಲ್ಲಂಘನೆ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ.
ಎಲ್ಲಾ ರಾಜ್ಯಗಳಿಂದಲೂ ಕಾರ್ಮಿಕರನ್ನು ಅವರ ಸ್ವಂತ ಊರಿಗೆ ಕಳುಹಿಸಲು ವ್ಯವಸ್ಥೆಯಾಗುತ್ತಿದೆ. ಆದರೆ ರಾಜ್ಯ ಸರಕಾರ ಮಾತ್ರ ಆಯಾ ರಾಜ್ಯಗಳಿಂದ ರೈಲುಗಳನ್ನು ಕಳುಹಿಸಲು ಕೋರಿ ಬರೆದ ಪತ್ರವನ್ನು ರದ್ದುಪಡಿಸಿರುುದು ಖಂಡನೀಯ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News