ಮಲ್ಪೆಯಿಂದ 9 ಬಸ್‌ಗಳಲ್ಲಿ ಹೊರಟ 269 ಆಂಧ್ರ, ತಮಿಳು ಕಾರ್ಮಿಕರು

Update: 2020-05-08 11:38 GMT

ಉಡುಪಿ, ಮೇ 8: ಲಾಕ್‌ಡೌನ್‌ನಿಂದಾಗಿ ಕಳೆದ 45 ದಿನಗಳಿಂದ ಜಿಲ್ಲೆಯ ಮೂರು ಬಂದರುಗಳಲ್ಲಿ ಬಾಕಿಯಾಗಿರುವ ಮೀನುಗಾರಿಕಾ ಬೋಟುಗಳಲ್ಲಿ ದುಡಿಯತ್ತಿರುವ ಹೊರರಾಜ್ಯಗಳ ಕಾರ್ಮಿಕರ ಪೈಕಿ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯದ ಕಾರ್ಮಿಕರನ್ನು ಇಂದು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದ್ದ ಒಟ್ಟು 9 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಳುಹಿಸಿಕೊಡಲಾಯಿತು.

ಹಸಿರು ವಲಯವಾಗಿರುವ ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಹಾಗೂ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವ ಬೇಡಿಕೆ ಮುಂದಿಟ್ಟಿರುವುದರಿಂದ ಈ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಳಗ್ಗೆ 11:30ರ ಸುಮಾರಿಗೆ ಮಲ್ಪೆ ಬಂದರಿನಿಂದ ಒಟ್ಟು 269 ಮಂದಿ ಕಾರ್ಮಿಕರು ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ಪ್ರಯಾಣ ಬೆಳೆಸಿದರು.

ಆಂಧ್ರಪ್ರದೇಶಕ್ಕೆ ಆರು ಬಸ್‌ಗಳಲ್ಲಿ 188 ಮಂದಿ ಮತ್ತು ತಮಿಳುನಾಡಿಗೆ ಮೂರು ಬಸ್‌ಗಳಲ್ಲಿ 81 ಮಂದಿ ತೆರಳಿದರು. ಒಂದೊಂದು ಬಸ್‌ಗಳಲ್ಲಿ 30-31 ಮಂದಿ ಕಾರ್ಮಿಕರಿಗೆ ಮಾತ್ರ ಅವಕಾಶ ಮಾಡಲಾಗಿತ್ತು. ಕಾರ್ಮಿಕರಿಂದ ಟಿಕೆಟ್ ದರವನ್ನು ಸಂಗ್ರಹಿಸಿ ಮೀನುಗಾರಿಕೆ ಇಲಾಖೆಯು ಕೆಎಸ್‌ಆರ್ ಟಿಸಿಗೆ ನೀಡಲಿದೆ. ಈ ಮೂಲಕ ಆಂಧ್ರ ಮತ್ತು ತಮಿಳುನಾಡಿನ ಬಹುತೇಕ ಮಂದಿ ಕಾರ್ಮಿಕರು ಜಿಲ್ಲೆಯಿಂದ ತೆರಳಿದಂತಾಗಿದೆ.

ಇನ್ನು ಉಳಿದ ಉತ್ತರ ಭಾರತದ ರಾಜ್ಯಗಳ ಕಾರ್ಮಿಕರ ನೋಂದಣಿಯನ್ನು ಸೇವಾಸಿಂಧು ವೆಬ್‌ಸೈಟ್ ಮೂಲಕ ಮಾಡಲಾಗುತ್ತಿದ್ದು, ಈವರೆಗೆ ಸುಮಾರು 600ಕ್ಕೂ ಅಧಿಕ ಮಂದಿಯ ಹೆಸರನ್ನು ನೋಂದಾಯಿಸಿಕೊಳ್ಳಲಾಗಿದೆ. ಇನ್ನು ಎರಡು ಮೂರು ದಿನಗಳಲ್ಲಿ ಆಯಾ ರಾಜ್ಯಗಳಿಂದ ಮಂಜೂರಾತಿ ದೊರೆತರೆ ಇವರಿಗೆಲ್ಲ ಪಾಸ್ ನೀಡಲಾಗುವುದು. ಬಸ್‌ನಲ್ಲಿ ಇವರನ್ನು ಕಳುಹಿಸಿಕೊಡುವುದು ಅಸಾಧ್ಯವಾಗುವುದರಿಂದ ರೈಲು ಸೇವೆ ಆರಂಭವಾದ ನಂತರ ವ್ಯವಸ್ಥೆ ಕಲ್ಪಿಸಲಾಗುವುದೆಂದು ಮೀನುಗಾರಿಕಾ ಉಪನಿರ್ದೇಶಕ ಗಣೇಶ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ರಘುಪತಿ ಭಟ್, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಆರ್.ಕೆ.ಗೋಪಾಲ್, ಜಿಲ್ಲಾಧಿ ಕಾರಿ ಜಿ.ಜಗದೀಶ್, ಕರಾವಳಿ ಕಾವಲು ಪಡೆಯ ಅಧೀಕ್ಷಕ ಆರ್.ಚೇತನ್, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ದಿನೇಶ್, ಸಹಾಯಕ ನಿರ್ದೇಶಕ ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News