ಮಂಗಳೂರಿನಲ್ಲಿ ಕೊರೋನ ಸಾಮುದಾಯಿಕವಾಗಿ ಹರಡಿದರೆ ಬಿಜೆಪಿ, ಸಂಸದರೇ ಹೊಣೆ: ಮಿಥುನ್ ರೈ

Update: 2020-05-08 11:46 GMT

ಮಂಗಳೂರು, ಮೇ 8: ಹೊರ ರಾಜ್ಯದ ಕಾರ್ಮಿಕರನ್ನು ಅವರ ಬೇಡಿಕೆಯಂತೆ ಅವರ ಊರುಗಳಿಗೆ ಕಳುಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯದ ಜತೆಗೆ ಗೊಂದಲ ಸೃಷ್ಟಿಸುತ್ತಿದೆ. ಇದರಿಂದಾಗಿ ಅವರು ನೂರಾರು ಸಂಖ್ಯೆಯಲ್ಲಿ ಅಲ್ಲಲ್ಲಿ ಜಮಾಯಿಸುವಂತಾಗಿದೆ. ನಗರದಲ್ಲಿ ಕೊರೋನ ಸಾಮುದಾಯಿಕವಾಗಿ ಹರಡಿದರೆ ಅದಕ್ಕೆ ಬಿಜೆಪಿ ಮತ್ತು ಸಂಸದರೇ ಹೊಣೆಯಾಗುತ್ತಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮೊದಲಾದ ರಾಜ್ಯಗಳ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹಿಂತಿರುಗಲು ಹಲವು ಕಡೆಗಳಲ್ಲಿ ಜಮಾಯಿಸುತ್ತಿದ್ದಾರೆ. ಸಂಸದರು ಅಥವಾ ಶಾಸಕರು ಕನಿಷ್ಠ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳುವ, ಅವರ ಸಂಕಷ್ಟಗಳನ್ನು ಕೇಳುವ ಕನಿಷ್ಠ ಸೌಜನ್ಯ ತೋರಿಲ್ಲ. ನಗರಕ್ಕೆ ಕಾಡುಕೋಣಗಳು ಬಂದಾಗ ಅದನ್ನು ನೋಡಲು ಹೋಗುವ ಶಾಸಕರಿಗೆ ಇಲ್ಲಿ ದುಡಿದ ಕಾರ್ಮಿಕರ ಸಂಕಷ್ಟ ಕಾಣುವುದಿಲ್ಲವೇ ಎಂದು ಮಿಥುನ್ ರೈ ಪ್ರಶ್ನಿಸಿದ್ದಾರೆ.

ಕಾರ್ಮಿಕರು ಸಂಕಷ್ಟದಲ್ಲಿರುವಾಗ ಅವರಿಗೆ ನೀರು, ಊಟದ ವ್ಯವಸ್ಥೆ ಮಾಡಿ ಅವರ ಜತೆ ಮಾತನಾಡಿ ಅವರಿಗೆ ವ್ಯವಸ್ಥೆ ಮಾಡುವುದನ್ನು ಬಿಟ್ಟು ಬಿಜೆಪಿಯ ಶಾಸಕರು ಸಂಸದರು ವೋಟ್ ಬ್ಯಾಂಕ್ ರಾಜಕೀಯವನ್ನಷ್ಟೇ ಮಾಡುತ್ತಾರೆ ಎಂದು ಅವರು ಆರೋಪಿಸಿದರು.

ಸೇವಾ ಸಿಂಧುವಿನಲ್ಲಿ ಕಾರ್ಮಿಕರು ಕೆಲ ದಿನಗಳಿಂದ ನೋಂದಣಿಗೆ ಹೋದರೆ ಅಲ್ಲಿ ಸರ್ವರ್ ಡೌನ್ ಎಂದು ಹೇಳಲಾಗುತ್ತಿದೆ. ಹೊರ ದೇಶಗಳಿಂದ ಬರುವವರಿಗೆ ವ್ಯವಸ್ಥೆ ಮಾಡಲಾಗುವುದಾದರೆ ನಮ್ಮದೇ ದೇಶದ ಕಾರ್ಮಿಕರಿಗೆ ಅವರ ಊರುಗಳಿಗೆ ತೆರಳಲು ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಿ ಸೂಕ್ತ ವ್ಯವಸ್ಥೆ ಮಾಡೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News