ಎಲ್ಲಾ ವೃತ್ತಿಗರಿಗೆ ಸರಕಾರದ ನೆರವು ಅಗತ್ಯ: ಕಾಂಗ್ರೆಸ್
ಉಡುಪಿ, ಮೇ 8: ಕೊರೋನಾ ಲಾಕ್‌ಡೌನ್ ಹೊಡೆತಕ್ಕೆ ತತ್ತರಿಸಿರುವ ಶ್ರಮಿಕ ವರ್ಗಕ್ಕೆ ಆರ್ಥಿಕ ಬೆಂಬಲ ನೀಡುವ ರಾಜ್ಯ ಸರಕಾರದ ಕ್ರಮ ಸ್ವಾಗತಾರ್ಹವಾದರೂ ತಾರತಮ್ಯವೆಸಗದೆ ನಿತ್ಯ ದುಡಿಮೆಯಲ್ಲಿ ಬದುಕುವ ಸಂಘಟಿತ ಮತ್ತು ಅಸಂಘಟಿತ ವಲಯದ ಇನ್ನಷ್ಟು ವೃತ್ತಿಗಳ ಶ್ರಮಿಕರಿಗೆ ನೆರವು ನೀಡಬೇಕಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.
ಸಣ್ಣ ಪುಟ್ಟ ವೃತ್ತಿ, ಸಾಂಪ್ರದಾಯಿಕ ಕೆಲಸ ಮಾಡುವ ಈ ಎಲ್ಲಾ ಜನರನ್ನೂ ಲಾಕ್‌ಡೌನ್ ಸಂಕಷ್ಟ ತೀವ್ರವಾಗಿ ತಟ್ಟಿದೆ. ಜೀವನೋಪಾಯಕ್ಕೆ ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿರುವ ಚಮ್ಮಾರರು, ದರ್ಜಿಗಳು, ಕುಂಬಾರರು, ಮರ ಬುಟ್ಟಿ ಹೆಣೆಯುವವರು, ಅಡುಗೆ ಮಾಡುವವರು, ಅರ್ಚಕರು, ಬಡಗಿಗಳು, ಅಕ್ಕಸಾಲಿಗರು, ಹೂಕಟ್ಟುವವರು, ಕುಶಲಕರ್ಮಿಗಳು, ಎಪಿಎಲ್ ಕಾರ್ಡ್ ಹೊಂದಿದ ಮಧ್ಯಮ ವರ್ಗದ ಕುಟುಂಬಗಳೂ ಸೇರಿದಂತೆ ಇನ್ನೂ ಹಲವು ವಿಭಾಗದಲ್ಲಿ ಸಣ್ಣಪುಟ್ಟ ಕೆಲಸ ಮಾಡುವ ಶ್ರಮಿಕ ವರ್ಗದವರಿಗೂ ಆರ್ಥಿಕ ಸಹಾಯ ಮಾಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.