ಕಾಂಗ್ರೆಸ್‌ನಿಂದ ವಲಸೆ ಕಾರ್ಮಿಕರಿಗೆ ತಪ್ಪು ಮಾಹಿತಿ: ಸಂಸದ ನಳಿನ್
ಮಂಗಳೂರು, ಮೇ 8: ವಲಸೆ ಕಾರ್ಮಿಕರಿಗೆ ತಪ್ಪು ಮಾಹಿತಿ ನೀಡಿ ಪ್ರತಿಭಟನೆಯ ನಾಟಕ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಪರೋಕ್ಷವಾಗಿ ಕೊರೋನ ಹಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.
ಸಂಸದರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡ ದಿಟ್ಟ ನಿರ್ಣಯಗಳಿಂದ ಕೊರೋ ನಿಯಂತ್ರಣದಲ್ಲಿದೆ. ಆದರೆ, ಲಾಕ್‌ಡೌನ್ ಜಾರಿಯಲ್ಲಿದ್ದರೂ ಮಂಗಳೂರು ರೈಲು ನಿಲ್ದಾಣದಲ್ಲಿ ಸಾವಿರಾರು ಮಂದಿ ಹೊರ ರಾಜ್ಯದ ಕಾರ್ಮಿಕರನ್ನು ಸೇರಿಸಿ ಕಾಂಗ್ರೆಸ್ ನಾಯಕರು ಭಾಷಣ ಮಾಡಿದ್ದಾರೆ. ಇದರಿಂದ ಕೊರೋನ ಪ್ರಕರಣ ಹೆಚ್ಚಾದರೆ ಅದಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದು ಅವರು ಹೇಳಿದರು.
ಸಾಮಾನ್ಯ ಜನತೆ ಕೂಡಾ ಕೊರೊನ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ. ಆದರೆ ಕಾಂಗ್ರೆಸ್ ಇಂತಹ ಸಮಯದಲ್ಲೂ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, ವಲಸೆ ಕಾರ್ಮಿಕರನ್ನು ಆಯಾ ಜಿಲ್ಲೆಗಳಿಗೆ ಕಳುಹಿಸಲು ರಾಜ್ಯ ಸರ್ಕಾರ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದ್ದರೂ, ಕಾಂಗ್ರೆಸ್ ಚೆಕ್ ನೀಡುವ, ಕಣ್ಣೀರು ಹಾಕುವ ನಾಟಕ ಮಾಡಿದೆ. ಹೊರ ರಾಜ್ಯದ ಕಾರ್ಮಿಕರನ್ನು ಕಳುಹಿಸಲು ಸರ್ಕಾರ ಶೀಘ್ರ ರೈಲು ವ್ಯವಸ್ಥೆ ಕಲ್ಪಿಸಲಿದೆ. ಅನುಮತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಅ್ಯಪ್ ಸಿದ್ಧಪಡಿಸಲಾಗಿದೆ ಎಂದರು.
ಜಿಲ್ಲಾಡಳಿತ ಯಾವುದೇ ಸೂಚನೆ ನೀಡದಿದ್ದರೂ ಸಾವಿರಾರು ಮಂದಿ ರೈಲು ನಿಲ್ದಾಣದಲ್ಲಿ ಸೇರಲು ಕಾರಣ ಏನು ? ಅವರ ಕೈಗೆ ಘೋಷಣಾ ಫಲಕ ನೀಡಿದವರು ಯಾರು ? ಲಾಕ್‌ಡೌನ್ ಜಾರಿಯಲ್ಲಿದ್ದರೂ ಕಾಂಗ್ರೆಸ್ ನಾಯಕರು ಮೈಕ್ ಹಿಡಿದು ಭಾಷಣ ಮಾಡಿದ್ದು ಯಾಕೆ ? ಇಂತಹ ಚಿಲ್ಲರೆ ರಾಜಕಾರಣ ಮಾಡಿದ ಪರಿಣಾಮವೇ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನತೆ ತಿರಸ್ಕರಿಸಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕರು ಅರಿತುಕೊಳ್ಳಲಿ ಎಂದು ನಳಿನ್‌ಕುಮಾರ್ ಹೇಳಿದರು.
ಹೊರ ರಾಜ್ಯದವರನ್ನು ಕಳುಹಿಸುವ ಬಗ್ಗೆ ಜಿಲ್ಲಾಡಳಿತ ಅಧಿಕೃತ ಘೋಷಣೆ ಹೊರಡಿಸಲಿದೆ. ಸುಳ್ಳು ಸಂದೇಶಗಳಿಗೆ ಕಾರ್ಮಿಕರು ಕಿವಿಗೊಡಬಾರದು. ವಲಸೆ ಕಾರ್ಮಿಕರು ಅನಿವಾರ್ಯವಾದರೆ ಮಾತ್ರ ತಮ್ಮ ಊರಿಗೆ ಹೋಗುವ ನಿರ್ಧಾರ ಕೈಗೊಳ್ಳಿ. ಇನ್ನು ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ಉದ್ಯಮ ಚಟುವಟಿಕೆ ಹಾಗೂ ಅಭಿವೃದ್ದಿ ಕಾಮಗಾರಿಗಳು ಆರಂಭವಾಗಲಿವೆ. ಹಾಗಾಗಿ ಜಿಲ್ಲೆಯಲ್ಲೇ ಇರುವಂತೆ ಸಂಸದರು ವಿನಂತಿಸಿದರು.
ವಿದೇಶದಲ್ಲಿರುವ ಭಾರತೀಯರನ್ನು ಕರೆತರುವ ಪ್ರಕ್ರಿಯೆ ಆರಂಭವಾಗಿದ್ದು ಮಂಗಳೂರಿಗೆ ಮೇ 14 ರಂದು ದುಬೈಯಿಂದ ಮೊದಲ ವಿಮಾನ ಬರಲಿದೆ. ಫಸ್ಟ್ ನ್ಯೂರೊದಿಂದ ಹಬ್ಬಿರುವ ಕೊರೊನ ಸೋಂಕಿನ ಮೂಲ ಪತ್ತೆ ಹಚ್ಚುವ ಬಗ್ಗೆ ಸೂಕ್ತ ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವರು ಆದೇಶಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದ್ದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಸಂಸದರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಶಾಸಕ ಡಿ.ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.