ತುಳು ಅರಿಯದ ಕನ್ನಡಿಗನಿಂದ ತುಳುಲಿಪಿಗಾಗಿ ಆ್ಯಪ್ ಅಭಿವೃದ್ಧಿ!

Update: 2020-05-08 12:27 GMT

ಉಡುಪಿ, ಮೇ 8: ತುಳು ಭಾಷೆ ಅರಿಯದ ಬೆಂಗಳೂರಿನ ಸಾಫ್ಟವೇರ್ ಉದ್ಯೋಗಿಯೊಬ್ಬರು, ಭಾಷೆಯ ಮೇಲಿನ ಆಸಕ್ತಿಯಿಂದ, ಅದರ ಲಿಪಿ ಬರೆಯಲು ಅನುಕೂಲವಾಗುವಂತೆ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ.

ತುಳು ಭಾಷೆ ಮಾತನಾಡಲು ಬಾರದ, ಸರಿಯಾಗಿ ಅರ್ಥ ಮಾಡಿಕೊಳ್ಳದ ದಾವಣಗೆರೆಯ ಲೋಹಿತ್ ಶಿವಮೂರ್ತಿ, ಅತ್ಯಂತ ಪ್ರಾಚೀನ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಲಿಪಿ ಬರೆಯಲು ‘ಪದ-ತುಳು’ ಎಂಬ ಆ್ಯಪ್‌ನ್ನು ರಚಿಸಿದ್ದು, ವಿಶೇಷ ಸಾಧನೆ ಮಾಡಿದ್ದಾರೆ.

2012ರಲ್ಲಿ ಕರಾವಳಿಯಲ್ಲಿ ನಡೆದ ತುಳು ಸಾಹಿತ್ಯ ಸಮ್ಮೇಳನದಲ್ಲಿ ಅಕಸ್ಮಿಕ ವಾಗಿ ಪಾಲ್ಗೊಂಡಿದ್ದ ಲೋಹಿತ್ ಶಿವಮೂರ್ತಿ, ತನ್ನಲ್ಲಿ ಮೂಡಿದ ಚಿಂತನೆಯ ಹಿನ್ನೆಲೆ ತುಳುಲಿಪಿಗೆ ಸಂಬಂಧಿಸಿ ಹಿರಿಯ ವಿಜ್ಞಾನಿ ಕೆ.ಪಿ.ರಾವ್ ಅವರೊಂದಿಗೆ ಮಾತುಕತೆ ನಡೆಸಿದರು. ಹೀಗೆಕಣಾದ ಎಂಬ ತಂಡದಿಂದ ಸಿದ್ಧವಾದ ತುಳು ಯುನಿಕೋಡ್ ಫಾಂಟ್(ತುಳುಸಿರಿ) ಬಳಸಿಕೊಂಡು ಆ್ಯಪ್‌ನ್ನು ಅಭಿವೃದ್ಧಿ ಪಡಿಸುವಲ್ಲಿ ಲೋಹಿತ್ ಯಶಸ್ವಿಯಾಗಿದ್ದಾರೆ.

ಆ್ಯಪ್ ಪ್ಲೇಸ್ಟೋರ್‌ನಲ್ಲಿ ಲಭ್ಯ: ಗೂಗಲ್ ಆ್ಯಂಡ್ರಾಯ್ಡ್ ಪ್ಲೇಸ್ಟೋರ್‌ನಲ್ಲಿ ಪದ-ತುಳು ಆ್ಯಪ್ ಲಭ್ಯವಿದೆ. ಆ್ಯಪ್ ಡೌನ್‌ಲೋಡ್ ಮಾಡಿ ಇಂಗ್ಲಿಷ್ ಅಕ್ಷರದಲ್ಲಿ ತುಳುವನ್ನು ಟೈಪ್ ಮಾಡಿದಾಗ ತುಳು ಲಿಪಿ ಅಕ್ಷರಗಳಾಗಿ ಪರಿವರ್ತನೆಯಾಗುತ್ತದೆ. ಇದನ್ನು ಸರಳವಾಗಿ ಬಳಸಲು ಅನುಕೂಲವಾಗುವಂತೆ ರೂಪಿಸಲಾಗಿದೆ.

ಲಿಪಿಗಳಿಗೆ ಸಂಬಂಧಿಸಿದ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸುವುದು ಲೋಹಿತ್ ಹವ್ಯಾಸ ಆಗಿದೆ. ಇವರಿಗೆ ಭಾಷೆ ಮತ್ತು ಲಿಪಿಗಳ ಬಗ್ಗೆ ಇರುವ ಅತೀವ ಪ್ರೀತಿ, ಅಭಿಮಾನವೇ ಅರಿಯದ ತುಳುಭಾಷೆಗೆ ಆ್ಯಪ್ ರಚನೆ ಮಾಡಲು ಮೂಲ ಕಾರಣವಾಗಿದೆ. ಇವರು ಈ ಹಿಂದೆ ರೂಪಿಸಿದ ಪದ - ಕನ್ನಡ ಆ್ಯಪ್ ಕೂಡ ಸಾಕಷ್ಟು ಸುದ್ದಿ ಮಾಡಿತ್ತು.

‘ತುಳು ಭಾಷೆ ಗೊತ್ತಿಲ್ಲದಿದ್ದರೂ ಅದಕ್ಕೊಂದು ಆ್ಯಪ್ ಅಭಿವೃದ್ಧಿಪಡಿಸುವಂತೆ ಆಗಿರುವುದಕ್ಕೆ ತುಂಬಾ ಖುಷಿ ಆಗುತ್ತದೆ. ಈ ಆ್ಯಪ್‌ನಲ್ಲಿ ಇನ್ನೂ ಸುಧಾರಣೆ ಕೆಲಸಗಳು ನಡೆಯುತ್ತಿವೆ. ಈ ಆ್ಯಪ್‌ನಲ್ಲಿ ಟೈಪ್ ಮಾಡಿರುವ ಅಕ್ಷರಗಳನ್ನು ಸ್ಕ್ರೀನ್‌ಶಾಟ್ ತೆಗೆದು ಬೇರೆ ಕಡೆಗಳಲ್ಲಿ ಪೋಸ್ಟ್ ಮಾಡಬಹುದಾಗಿದೆ ಎಂದು ಲೋಹಿತ್ ಶಿವಮೂರ್ತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News