ಮಂಗಳೂರು: ಕೆಸಿಎಫ್‌ನಿಂದ ಕೊರೋನ ವಾರಿಯರ್ಸ್‌ಗೆ ಫಲಾಹಾರ ವಿತರಣೆ

Update: 2020-05-08 13:39 GMT

ಮಂಗಳೂರು, ಮೇ 8: ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೋರಮ್ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 300 ಕೋವಿಡ್ ವಾರಿಯರ್ಸ್‌ಗೆ ಫಲಾಹಾರದ ಕಿಟ್ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಕೆಸಿಎಫ್ ಪರವಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಸದಸ್ಯ ಅಶ್ರಫ್ ಕಿನಾರ, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ ಡಾ. ಸದಾಶಿವ ಶಾನ್‌ಭೋಗ್, ಡಾ.ಜೂಲಿಯಟ್ ಸಲ್ದಾನ ಉಪಸ್ಥಿತರಿದ್ದರು.

ತಮ್ಮ ಜೀವವನ್ನು ಒತ್ತೆಯಿಟ್ಟು ಮಾರಕ ಕೊರೋನ ವಿರುದ್ಧ ಹೋರಾಡುತ್ತಿರುವ ವೈದ್ಯರು, ದಾದಿಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿಗಳನ್ನು ಗೌರವದಿಂದ ಗುರುತಿಸುವುದು ಸಮಾಜದ ಕರ್ತವ್ಯವಾಗಿದೆ. ದೇಶಾದ್ಯಂತದ ಎಲ್ಲರಿಗೂ ಪ್ರೇರಣೆಯಾಗುವ ನಿಟ್ಟಿನಲ್ಲಿ ದ.ಕ.ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಗಳಿಗೆ ಫಲಾಹಾರ ಕಿಟ್ ನೀಡಲಾಯಿತು. ಸೌದಿ ಅರೇಬಿಯಾ, ಯುಎಇ, ಕತರ್, ಕುವೈತ್, ಬಹರೈನ್, ಒಮಾನ್ ಮಲೇಷಿಯಾ, ಇಂಗ್ಲೆಂಡ್ ಮುಂತಾದ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಕೆಸಿಎಫ್ ಕೊರೋನ -ಲಾಕ್‌ಡೌನ್‌ನಿಂದಾಗಿ ವಿವಿಧ ದೇಶಗಳಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಅಗತ್ಯ, ಔಷಧಿ, ಅನ್ನಾಹಾರ ಪೂರೈಕೆ ಮುಂತಾದ ನೆರವುಗಳನ್ನು ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೆಸಿಎಫ್ ಯುಎಇ ಘಟಕವು ಅಲ್ಲಿನ ಪೊಲೀಸ್ ಇಲಾಖೆಯ ವಿಶೇಷ ತರಬೇತಿಯನ್ನು ಪಡೆದು ಕೋವಿಡ್ ವಾರಿಯರ್ಸ್ ತಂಡವಾಗಿ ಕಾರ್ಯಾಚರಿಸಿದೆ ಎಂದು ಕೆಸಿಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ ಡಾ. ಶೇಖ್ ಬಾವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News