ವಿದೇಶ, ಹೊರರಾಜ್ಯಗಳಿಂದ ಬರುವವರ ಕ್ವಾರಂಟೈನ್‌ಗೆ ಸಕಲ ಸಿದ್ಧತೆ: ಉಡುಪಿ ಡಿಸಿ ಜಿ.ಜಗದೀಶ್

Update: 2020-05-08 13:01 GMT

ಉಡುಪಿ, ಮೇ 8: ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಗೆ ವಿದೇಶಗಳಿಂದ ಮತ್ತು ಹೊರಾಜ್ಯದಿಂದ ಬರುವವರ ಕ್ವಾರಂಟೈನ್‌ಗೆ ಬೇಕಾದ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕ್ವಾರಂಟೈನ್‌ಗಾಗಿ ಜಿಲ್ಲೆಯ ಖಾಸಗಿ ಶಾಲೆ ಮತ್ತು ಕಾಲೇಜುಗಳು ತಮ್ಮ ವ್ಯಾಪ್ತಿಯ ಕಟ್ಟಡಗಳು ಮತ್ತು ಹಾಸ್ಟೆಲ್‌ಗಳನ್ನು ಜಿಲ್ಲಾಡಳಿತ ಕೋರಿದ ಕೂಡಲೇ ಬಿಟ್ಟುಕೊಡುವಂತೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಶುಕ್ರವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲಾ ಮುಖ್ಯೋಪಾಧ್ಯಾಯರುಗಳ, ವಸತಿ ಶಾಲೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಇದುವರೆಗೂ ಕೋವಿಡ್-19ರ ವಿರುದ್ದದ ಹೋರಾಟದಲ್ಲಿ ಜಿಲ್ಲಾಡಳಿತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಮುಂದೆಯೂ ವಿದೇಶ ಮತ್ತು ಹೊರರಾಜ್ಯದಿಂದ ಆಗಮಿಸುವ ಜಿಲ್ಲೆಯ ಜನರಿಂದ, ಜಿಲ್ಲೆಯಲ್ಲಿರುವ ನಾಗರಿಕರನ್ನು ಕೋವಿಡ್‌ನಿಂದ ರಕ್ಷಿಸುವುದು ಅತ್ಯಂತಸವಾಲಿನ ಕೆಲಸ. ಇದಕ್ಕಾಗಿ ವಿದೇಶ ಮತ್ತು ಹೊರರಾಜ್ಯಗಳಿಂದ ಬರುವವರನ್ನು ಕ್ವಾರಂಟೈನ್‌ನಲ್ಲಿರಿಸಬೇಕಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸರಕಾರಿ ಹಾಸ್ಟೆಲ್‌ಗಳು, ಖಾಸಗಿ ಹಾಸ್ಟಲ್‌ಗಳು ಮತ್ತು ಶಾಲಾ-ಕಾಲೇಜುಗಳನ್ನು, ವಸತಿ ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದುದರಿಂದ ಜಿಲ್ಲಾಡಳಿತ ಸೂಚಿಸಿದ ಕೂಡಲೇ ಸಂಬಂಧಪಟ್ಟ ಸಂಸ್ಥೆಗಳು ಯಾವುದೇ ಸಬೂಬುಗಳನ್ನು ನೀಡದೇ ಕೂಡಲೇತಮ್ಮ ಕಟ್ಟಡವನ್ನು ಜಿಲ್ಲಾಡಳಿತಕ್ಕೆ ಬಿಟ್ಟುಕೊಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಕಟ್ಟಡಗಳಿಗೆ ಸಣ್ಣಪುಟ್ಟ ದುರಸ್ತಿಗಳಿದ್ದರೆ ತಕ್ಷಣ ಮಾಡಿಸುವಂತೆಯೂ ಅವರು ತಿಳಿಸಿದರು.

ಕ್ವಾರಂಟೈನ್‌ಗಾಗಿ ಬಳಸಿಕೊಳ್ಳುವ ಸರಕಾರಿ ಹಾಸ್ಟೆಲ್‌ಗಳು, ಖಾಸಗಿ ಹಾಸ್ಟಲ್ ಗಳು ಮತ್ತು ಶಾಲಾ ಕಾಲೇಜುಗಳನ್ನು ಕ್ವಾರಂಟೈನ್ ಮುಗಿದ ಕೂಡಲೇ ಸಂಪೂರ್ಣವಾಗಿ ಸ್ಯಾನಟೈಸ್ ಮಾಡಿ, ಯಾವುದೇ ಸಂದರ್ಭದಲ್ಲೂ ಕೋವಿಡ್ -19 ಕಂಡುಬರದ ರೀತಿಯಲ್ಲಿ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮರಳಿ ಬಿಟ್ಟು ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈಗಾಗಲೇ ಜಿಲ್ಲೆಗೆ ಹೊರರಾಜ್ಯಗಳಿಂದ ಬರಲು ಪ್ರಥಮ ಹಂತದಲ್ಲಿ ಸುಮಾರು 6000 ಮಂದಿ ನೊಂದಾಯಿಸಿಕೊಂಡು ಕಾಯುತ್ತಿದ್ದಾರೆ. ಇವರಿಗೆ ರಾಜ್ಯ ಸರಕಾರ ಅನುಮತಿ ನೀಡಿದ ಕೂಡಲೇ ಜಿಲ್ಲೆಗೆ ಇವರ ಪ್ರವೇಶ ಆರಂಭವಾಗಲಿದೆ. ಮೊದಲಿಗೆ ಇವರನ್ನು ಜಿಲ್ಲಾ ಗಡಿಯಲ್ಲಿ ಆರೋಗ್ಯ ತಪಾಸಣೆ ಮಾಡಿ, ಪೊಲೀಸ್ ಎಸ್ಕಾರ್ಟ್‌ನೊಂದಿಗೆ ಸಂಬಂದಪಟ್ಟ ತಾಲೂಕಿನ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗುವುದು ಎಂದು ಜಿ.ಜಗದೀಶ್ ವಿವರಿಸಿದರು.

ಆರೋಗ್ಯ ಪರೀಕ್ಷೆಯ ವೇಳೆ ಇವರಲ್ಲಿ ರೋಗ ಲಕ್ಷಣ ಕಂಡು ಬಂದಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗುವುದು. ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಆಗ ಬಯಸುವವರು ಹೋಟೆಲ್‌ನ ವೆಚ್ಚವನ್ನು ತಾವೇ ಭರಿಸಬೇಕು. ಜಿಲ್ಲಾಡಳಿತ ವ್ಯವಸ್ಥೆ ಮಾಡುವ ಕೇಂದ್ರಗಳಲ್ಲಿ ಉತ್ತಮ ರೀತಿಯಲ್ಲಿ ಉಚಿತ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದ ಜಿಲ್ಲಾಧಿಕಾರಿ ಜಿ.ಜಗದೀಶ್, ವಿದೇಶಗಳಿಂದ ಬರುವವರನ್ನು ಪ್ರತ್ಯೆಕವಾಗಿ ಸಿಂಗಲ್ ರೂಂಗಳಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ವಿದೇಶದಿಂದ ಮತ್ತು ಹೊರರಾಜ್ಯದಿಂದ ಜಿಲ್ಲೆಗೆ ಸುಮಾರು 20,000 ಮಂದಿ ಆಗಮಿಸುವ ನಿರೀಕ್ಷೆಯಿದೆ ಎಂದರು.

ಲಾಕ್‌ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿದ್ದ ವಲಸೆ ಕಾರ್ಮಿಕರಿಗೆ ಅತ್ಯುತ್ತಮ ರೀತಿಯಲ್ಲಿ ಅಗತ್ಯ ಸೌಲಭ್ಯ ಒದಗಿಸುವಲ್ಲಿ ಹಾಗೂ ಲಾಕ್‌ಡೌನ್ ನಿರ್ಬಂಧಗಳನ್ನು ಇಡೀ ರಾಜ್ಯದಲ್ಲೇ ಅತ್ಯಂತ ಶಿಸ್ತಿನಿಂದ ಅತ್ಯುತ್ತಮವಾಗಿ ಪಾಲಿಸಿದ ಜಿಲ್ಲೆ ಎಂಬ ಹೆಗ್ಗಳಿಕೆ ಉಡುಪಿಗಿದೆ. ಹೊರಗಿನಿಂದ ಬರುವ ವ್ಯಕ್ತಿಗಳಿಂದ ಜಿಲ್ಲೆಯ 13 ಲಕ್ಷ ಜನರಲ್ಲಿ ಕೋವಿಡ್ ಸೋಂಕು ಹರಡದಂತೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಉತ್ತಮ ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಟ್ಟುನಿಟ್ಟಿನ ಕ್ರಮಗಳನ್ನು ಆಯೋಜಿಸಿ, ಯಾವುದೇ ಒತ್ತಡಗಳಿಗೆ ಮಣಿಯದೇ ಜಿಲ್ಲೆಯ ಜನರ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡುವ ರೀತಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಜಿ.ಜಗದೀಶ್ ತಿಳಿಸಿದರು.

ಜಿಲ್ಲಾ ಕೊರೋನ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 12 ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದ್ದು, ಹೊರಗಿನಿಂದ ಬರುವವರಿಗೆ ಚೆಕ್‌ಪೊಸ್ಟ್‌ಗಳಲ್ಲಿ ಆರೋಗ್ಯ ತಪಾಸಣೆ ನಡೆಸಿ ಪ್ರವೇಶ ನೀಡಲಾಗುತ್ತಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಂಬಂಧಪಟ್ಟ ಸಂಸ್ಥೆಗಳ ಅಗತ್ಯ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿರುವ ಶಾಲೆ, ಕಾಲೇಜು ಮತ್ತು ಹಾಸ್ಟೆಲ್‌ಗಳ ಹಾಗೂ ಹೋಟೆಲ್‌ಗಳ ವಿವರಗಳನ್ನು ಸಂಗ್ರಹಿಸಿಕೊಂಡು, ಅಗತ್ಯವಿರುವ ಕಡೆಯಲ್ಲಿ ಎಲ್ಲಾ ಮೂಲಭೂತ ಅಗತ್ಯಗಳೊಂದಿಗೆ, ಜಿಲ್ಲಾಡಳಿತ ಸೂಚಿಸಿದ ಕೂಡಲೇ ಕ್ವಾರಂಟೈನ್ ಕೇಂದ್ರ ತೆರೆಯಲು ಸಿದ್ದವಾಗಿರುವಂತೆ ಡಿಸಿ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡಾ, ಡಿಡಿಪಿಐ ಶೇಷಶಯನ ಕಾರಿಂಜ ಉಪಸ್ಥಿತರಿದ್ದರು.

ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳ, ವಸತಿ ಶಾಲೆಗಳ ಪ್ರಾಂಶುಪಾಲರು, ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News