×
Ad

ಕೋವಿಡ್ ಆಸ್ಪತ್ರೆ ಬಗ್ಗೆ ಕಾಂಗ್ರೆಸ್‌ನಿಂದ ಅನಗತ್ಯ ಟೀಕೆ: ವೇದವ್ಯಾಸ ಕಾಮತ್

Update: 2020-05-08 18:43 IST

ಮಂಗಳೂರು, ಮೇ 8: ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ ವೆನ್ಲಾಕ್ ಆಸ್ಪತ್ರೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಚಿಕಿತ್ಸೆ ಪಡೆದ 13 ಮಂದಿ ಸೋಂಕಿತರು ಈಗಾಗಲೇ ಗುಣಮುಖರಾಗಿದ್ದಾರೆ. ಆದರೆ ಜಿಲ್ಲಾಡಳಿತಕ್ಕೆ ಕಪ್ಪು ಚುಕ್ಕೆ ತರಲು ಕಾಂಗ್ರೆಸ್ ನಾಯಕರು ಕೋವಿಡ್ ಆಸ್ಪತ್ರೆಯನ್ನು ಟೀಕಿಸುತ್ತಿದ್ದಾರೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ಜೆ.ಆರ್.ಲೋಬೋ ಅವರು ಕರೊನಾ ಟೆಸ್ಟ್ ಸರಿಯಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಭಯದ ವಾತಾವರಣ ನಿರ್ಮಿಸಲು ಯತ್ನಿಸಿದ್ದಾರೆ. ಜನರಲ್ಲಿ ಈ ರೀತಿ ತಪ್ಪು ಅಭಿಪ್ರಾಯ ಮೂಡಿಸುವುದು ಸರಿಯಲ್ಲ’ಎಂದರು.

ಕೊರೊನ ವಿಷಯದಲ್ಲಿ ಒಂದಾಗಿ ಕೆಲಸ ಮಾಡುವ ಭರವಸೆ ನೀಡಿದ ಕಾಂಗ್ರೆಸ್ ಈಗ ಕೀಳು ಮಟ್ಟದ ರಾಜಕೀಯದಲ್ಲಿ ತೊಡಗಿದೆ. ವಲಸೆ ಕಾರ್ಮಿಕರ ವಿಷಯದಲ್ಲಿ ಶಾಸಕ ಯು.ಟಿ.ಖಾದರ್ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ರೈಲು ನಿಲ್ದಾಣದ ಒಳಗೆ ಮೈಕ್ ಹಿಡಿದು ಭಾಷಣ ಮಾಡಲು ಅನುಮತಿ ನೀಡಿದವರು ಯಾರು ? ಅಧಿಕಾರಿಗಳು ರೈಲ್ವೆ ನಿಲ್ದಾಣಕ್ಕೆ ಬಂದು ಸ್ಪಷ್ಟನೆ ನೀಡಿದ ಬಳಿಕವೂ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಾಟಕ ಮಾಡಿದ್ದು ಯಾಕೆ ಎಂದು ಅವರು ಪ್ರಶ್ನಿಸಿದರು.

ಕಾರ್ಮಿಕರನ್ನು ಆಯಾ ಜಿಲ್ಲೆ ಹಾಗೂ ರಾಜ್ಯಗಳಿಗೆ ಕಳುಹಿಸುವ ಕಾರ್ಯ ನಡೆಯುತ್ತಿದೆ. ಆದರೆ ಕಾಂಗ್ರೆಸ್ ತಪ್ಪು ಮಾಹಿತಿ ನೀಡುವ ಮೂಲಕ ಅವರನ್ನು ಹಾದಿ ತಪ್ಪಿಸುತ್ತಿದೆ. ಮಳೆಗಾಲ ಆರಂಭವಾಗಲಿದ್ದು ಮಂಗಳೂರು ನಗರದಲ್ಲಿ ಕೆಲವು ಅಭಿವೃದ್ದಿ ಕಾರ್ಯಗಳು ತುರ್ತಾಗಿ ನಡೆಯಬೇಕಾಗಿದೆ. ಕಾರ್ಮಿಕರಿಗೆ ತಪ್ಪು ಸಂದೇಶ ನೀಡಿ ಅವರನ್ನು ಊರಿಗೆ ಕಳುಹಿಸುವ ಮೂಲಕ ಕಾಮಗಾರಿಗಳಿಗೆ ಅಡ್ಡಿ ಪಡಿಸಲು ಕಾಂಗ್ರೆಸ್ ಷಡ್ಯಂತ್ರ ನಡೆಸಿದೆ ಎನ್ನುವ ಗುಮಾನಿಯೂ ಇದೆ ಎಂದು ಶಾಸಕ ಕಾಮತ್ ಹೇಳಿದರು.

ಕಾರ್ಪೋರೇಟರ್ ಮನೋಹರ ಶೆಟ್ಟಿ, ಬಿಜೆಪಿ ಮುಖಂಡ ನಿತಿನ್‌ಕುಮಾರ್ ಉಪಸ್ಥಿತರಿದ್ದರು.

ಶ್ರಮಿಕರಿಗೆ ಪ್ಯಾಕೇಜ್ ಬಗ್ಗೆ ಜಿಲ್ಲಾಡಳಿತ ಸೂಚನೆ ಪಾಲಿಸಲು ಕರೆ
ಶ್ರಮಿಕ ವರ್ಗಕ್ಕೆ ರಾಜ್ಯ ಸರ್ಕಾರ 1610 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಿದೆ. ಸರ್ಕಾರ ಘೋಷಣೆ ಮಾತ್ರ ಮಾಡಿದ್ದು, ಅನುಷ್ಠಾನಗೊಳಿಸುವ ವಿಧಾನದ ಬಗ್ಗೆ ಜಿಲ್ಲಾಡಳಿತಕ್ಕೆ ಆದೇಶ ನೀಡಬೇಕಾಗಿದೆ. ಯಾವುದೇ ಪಕ್ಷದವರು, ಕಾರ್ಮಿಕ ಸಂಘಟನೆಯವರು, ರಾಜಕಾರಣಿಗಳು ದಾಖಲೆ ಕೇಳಿದರೆ ಕಾರ್ಮಿಕರು ನೀಡಬಾರದು. ಜಿಲ್ಲಾಡಳಿತ ಮುಂದೆ ನೀಡುವ ಸೂಚನೆಗಳನ್ನು ಪಾಲಿಸಬೇಕು ಎಂದು ಶಾಸಕ ಕಾಮತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News