ಕೇಂದ್ರ ಸರಕಾರದ ಮನವಿ: ಸಂಸದ ತೇಜಸ್ವಿ ಸೂರ್ಯರ ಪ್ರಚೋದನಕಾರಿ ಟ್ವೀಟ್‌ ಬ್ಲಾಕ್ ಮಾಡಿದ ಟ್ವಿಟರ್

Update: 2020-05-08 13:13 GMT

ಹೊಸದಿಲ್ಲಿ, ಮೇ 8: ಸಂಸದ ತೇಜಸ್ವಿ ಸೂರ್ಯ ಆಡಳಿತ ಬಿಜೆಪಿ ಪಕ್ಷದಲ್ಲಿ ಯುವ ನಾಯಕನಾಗಿರಬಹುದು. ಆದರೆ ಸಂಸದನಾಗುವ ಮೊದಲಿನ ಅವರ ಪ್ರಖರ ಧರ್ಮಾಂಧತೆ ಭಾರತ ಸರಕಾರಕ್ಕೆ ರಾಜತಾಂತ್ರಿಕ ಮುಜುಗರವನ್ನು ಮಾಡಿರುವಂತಿದೆ. ಸರಕಾರವು ಕಳೆದ ತಿಂಗಳು ಮಾಡಿಕೊಂಡಿದ್ದ ಮನವಿಯ ಮೇರೆಗೆ 2015ರಿಂದೀಚಿನ ತೇಜಸ್ವಿಯವರ ಟ್ವೀಟ್‌ಗಳ ಪೈಕಿ ಇಸ್ಲಾಮಿಗೂ ಭಯೋತ್ಪಾದಕರಿಗೂ ತಳುಕು ಹಾಕಿದ್ದ ಟ್ವೀಟ್‌ನ್ನು ಟ್ವಿಟರ್ ತೆಗೆದುಹಾಕಿದೆ.

“ಹೌದು, ಭಯೋತ್ಪಾದನೆಗೆ ಧರ್ಮವಿಲ್ಲ ನಿಜ. ಆದರೆ ಭಯೋತ್ಪಾದಕನಿಗೆ ಖಂಡಿತವಾಗಿಯೂ ಧರ್ಮವಿದೆ ಮತ್ತು ಅದು ಹೆಚ್ಚಿನ ಪ್ರಕರಣಗಳಲ್ಲಿ ಇಸ್ಲಾಂ ಆಗಿದೆ” ಎಂದು ತೇಜಸ್ವಿ ತನ್ನ ಈ ಟ್ವೀಟ್‌ನಲ್ಲಿ ಹೇಳಿದ್ದರು.

ಭಾರತ ಸರಕಾರದ ಮನವಿಯ ಮೇರೆಗೆ ಭಾರತದಲ್ಲಿ ವೀಕ್ಷಣೆಗೆ ಅಲಭ್ಯವಾಗಿಸಿರುವ ನೂರಾರು ಟ್ವೀಟ್‌ಗಳಲ್ಲಿ ತೇಜಸ್ವಿಯವರ ಟ್ವೀಟ್ ಕೂಡ ಒಂದಾಗಿದೆ ಎನ್ನುವುದನ್ನು ಲುಮೆನ್ ಡಾಟಾಬೇಸ್‌ನ ಪ್ರಕಟಣೆಯು ತೋರಿಸಿದೆ. ಹಾರ್ವರ್ಡ್ ವಿವಿಯ ಬರ್ಕಮನ್ ಕ್ಲೀನ್ ಸೆಂಟರ್ ಆರಂಭಿಸಿರುವ ಈ ಡಾಟಾಬೇಸ್ ಕಂಟೆಂಟ್‌ಗಳನ್ನು ತೆಗೆದುಹಾಕುವವಂತೆ ಟ್ವಿಟರ್ ಸ್ವೀಕರಿಸುವ ಇಂತಹ ಮನವಿಗಳನ್ನು ಸಂಕಲಿಸಿ ಪ್ರಕಟಿಸುತ್ತದೆ.

ಭಾರತದ ಮನವಿಯ ಮೇರೆಗೆ ತೆಗೆಯಲಾಗಿರುವ ಇಂತಹ ಟ್ವೀಟ್‌ಗಳಲ್ಲಿ ಹೆಚ್ಚಿನವು ಕೋಮುಬಣ್ಣವನ್ನು ಹೊಂದಿದ್ದವು ಅಥವಾ ಧಾರ್ಮಿಕ ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಗುವ ಸಾಧ್ಯತೆಯನ್ನು ಹೊಂದಿದ್ದವು.

ಟ್ವಿಟರ್ ತಡೆಹಿಡಿದಿರುವ ಟ್ವೀಟ್‌ಗಳಲ್ಲಿ ಕೆಲವು ಭಾರೀ ಸಂಖ್ಯೆಯಲ್ಲಿ ಫಾಲೋವರ್‌ಗಳನ್ನು ಹೊಂದಿರುವ ಬಲಪಂಥೀಯ ಖಾತೆಗಳಿಗೆ ಸೇರಿದ್ದಾಗಿವೆ. ಬೆಂಗಳೂರು (ದಕ್ಷಿಣ) ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ತೇಜಸ್ವಿ ಐದು ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ.

ತೇಜಸ್ವಿಯವರ ಟ್ವೀಟ್‌ನ್ನು ತೆಗೆಯುವಂತೆ ಕೋರಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಎ.28ರಂದು ಟ್ವಿಟರ್‌ಗೆ ಕಳುಹಿಸಿದ್ದ ನೋಟಿಸ್‌ನಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಕಲಂ 69 ಎ ಅನ್ನು ಉಲ್ಲೇಖಿಸಿತ್ತು.

ಭಾರತವು ಕೋರಿದ್ದ ಟ್ವೀಟ್‌ಗಳನ್ನು ಟ್ವಿಟರ್ ಭಾರತೀಯ ಬಳಕೆದಾರರಿಗೆ ಅಲಭ್ಯವಾಗಿಸಿದೆಯಾದರೂ ಇತರ ದೇಶಗಳಲ್ಲಿ ಇವುಗಳನ್ನು ವೀಕ್ಷಿಸಬಹುದಾಗಿದೆ.

ಟ್ವಿಟರ್ ತೆಗೆದುಹಾಕಿರುವ ಇಂತಹ ಸುಮಾರು 130 ಟ್ವೀಟ್‌ಗಳನ್ನು ಸುದ್ದಿ ಜಾಲತಾಣ Thewire.in ವಿಶ್ಲೇಷಿಸಿದ್ದು, ಇವುಗಳ ಪೈಕಿ ಶೇ.60ರಷ್ಟು ಇಸ್ಲಾಮಾಫೋಬಿಕ್ ಆಗಿದ್ದರೆ,ಉಳಿದವುಗಳನ್ನು ಇಸ್ಲಾಮಿಸ್ಟ್,ಹಿಂದು ವಿರೋಧಿ, ಬಿಜೆಪಿ/ಆರ್‌ಎಸ್‌ಎಸ್ ವಿರೋಧಿ ಎಂದು ಪರಿಗಣಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News