×
Ad

10ಕ್ಕೂ ಅಧಿಕ ಪ್ರಕರಣಗಳಿಗೆ ಪಡೀಲ್‌ನ ಖಾಸಗಿ ಆಸ್ಪತ್ರೆಯೇ ಮೂಲ

Update: 2020-05-08 20:35 IST

ಮಂಗಳೂರು, ಮೇ 8: ಕಳೆದ ಒಂದುವರೆ ತಿಂಗಳಲ್ಲಿ ದ.ಕ. ಜಿಲ್ಲೆಯಲ್ಲಿ ಪತ್ತೆಯಾದ 28 ಕೊರೋನ ಸೋಂಕು ಪಾಸಿಟಿವ್‌ಗಳ ಪೈಕಿ 22 ದ.ಕ.ಜಿಲ್ಲೆಯ ನಿವಾಸಿಗಳದ್ದಾಗಿದೆ. ಆ ಪೈಕಿ 10ಕ್ಕೂ ಅಧಿಕ ಪ್ರಕರಣಗಳಿಗೆ ನಗರದ ಪಡೀಲ್‌ನ ಖಾಸಗಿ ಆಸ್ಪತ್ರೆಯೇ ಮೂಲವಾಗಿದೆ. ಆದರೆ ಈ ಆಸ್ಪತ್ರೆಯ ವಿರುದ್ಧ ದ.ಕ.ಜಿಲ್ಲಾಡಳಿತ ಇನ್ನೂ ಕೂಡ ಸೂಕ್ತ ಕ್ರಮ ಜರುಗಿಸದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಸಮಾಧಾನವೂ ವ್ಯಕ್ತವಾಗಿವೆ.

ಪಡೀಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದ ಬಂಟ್ವಾಳ ಪೇಟೆಯ 75 ವರ್ಷದ ವೃದ್ಧೆಗೆ ಸೋಂಕು ದೃಢಪಟ್ಟಿತ್ತು. ಅಲ್ಲದೆ ಎ.23ರಂದು ಇವರು ಮೃತಪಟ್ಟಿದ್ದರು. ಆ ಬಳಿಕ ಇದೇ ಗ್ರಾಮದ 33 ವರ್ಷ ಪ್ರಾಯದ ಮಹಿಳೆಗೆ ಸೋಂಕು ದೃಢಪಟ್ಟಿತ್ತು. ನಂತರ ಈ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿನ 47 ವರ್ಷ ಪ್ರಾಯದ ಮಹಿಳೆಗೆ ಎ.26ರಂದು ಸೋಂಕು ದೃಢಪಟ್ಟಿತ್ತು. ತದನಂತರ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಲಶೇಖರ-ಶಕ್ತಿನಗರದ 80 ವರ್ಷದ ವೃದ್ಧೆ ಮತ್ತು ಅವರ ಸಂಪರ್ಕದಲ್ಲಿದ್ದ 45 ವರ್ಷದ ಅವರ ಮಗನಿಗೆ ಎ.27ರಂದು ಸೋಂಕು ದೃಢಪಟ್ಟಿತ್ತು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳೂರಿನ 58ರ ಹರೆಯದ ಮಹಿಳೆಗೆ ಎ.30ರಂದು ಸೋಂಕು ದೃಢಪಟ್ಟಿತ್ತು. ಇವರು ಕೂಡ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಇವರ ಸಂಪರ್ಕದಿಂದ ಇವರ ಪತಿ, ಮಗಳು, ಮೊಮ್ಮಗಳು, ಅಳಿಯನಿಗೂ ಸೋಂಕು ದೃಢಪಟ್ಟಿತ್ತು. ಅಷ್ಟೇ ಅಲ್ಲ, ಎ.19ರಂದು ಕೊರೋನಕ್ಕೆ ಪ್ರಥಮ ಬಲಿಯಾದ ಬಂಟ್ವಾಳ ಪೇಟೆಯ 50ರ ಹರೆಯದ ಮಹಿಳೆಯ 16 ವರ್ಷ ಪ್ರಾಯದ ಮಗಳಿಗೂ ಸೋಂಕು ದೃಢಪಟ್ಟಿತ್ತು. ಹೀಗೆ ಸುಮಾರು 10ಕ್ಕೂ ಅಧಿಕ ಪ್ರಕರಣಗಳಿಗೆ ಪಡೀಲ್‌ನ ಖಾಸಗಿ ಆಸ್ಪತ್ರೆಯೇ ಮೂಲವಾಗಿದೆ. ಆದರೆ ಈ ಆಸ್ಪತ್ರೆಗೆ ಯಾವ ಮೂಲದಿಂದ ಸೋಂಕು ತಗಲಿತು ಎಂಬುದು ಸ್ಪಷ್ಟವಾಗಿಲ್ಲ.

ಈ ಮಧ್ಯೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪಡೀಲ್‌ನ ಖಾಸಗಿ ಆಸ್ಪತ್ರೆಯ ಕೊರೋನ ಸೋಂಕಿನ ಮೂಲವನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನು ಈ ಆಸ್ಪತ್ರೆಯ ಸಂಪರ್ಕದಲ್ಲಿದ್ದ 200ಕ್ಕೂ ಅಧಿಕ ಮಂದಿಯ ಗಂಟಲಿನ ದ್ರವ ಪರೀಕ್ಷೆ ನಡೆಸಲಾಗಿದ್ದು, ಅದರ ವರದಿಯು ನೆಗೆಟಿವ್ ಬಂದಿದ್ದರೂ ಆಸ್ಪತ್ರೆಯ ಸಂಪರ್ಕದಲ್ಲಿ ಯಾರ್ಯಾರು ಮತ್ತು ಎಲ್ಲಿಯವರು ಎಂಬುದರ ಬಗ್ಗೆ ನಿಖರ ಮಾಹಿತಿ ಇನ್ನೂ ಜಿಲ್ಲಾಡಳಿತಕ್ಕೆ ಸಿಕ್ಕಿಲ್ಲ.

ಎ.23ರಂದು ಪಡೀಲ್‌ನ ಈ ಖಾಸಗಿ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶ ಕಂಟೈನ್ಮೆಂಟ್ ರೆನ್ ಆಗಿ ಮತ್ತು ಈ ಆಸ್ಪತ್ರೆಯನ್ನು ‘ಸುಪರ್‌ವೈಸ್ಡ್ ಐಸೋಲೇಶನ್ ಸೆಂಟರ್’ ಆಗಿ ಜಿಲ್ಲಾಧಿಕಾರಿ ಘೋಷಿಸಿದ್ದರು. ಅಲ್ಲದೆ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ರಾಜೇಶ್ ಶೆಟ್ಟಿಯವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು.

ಕಾನೂನು ಕ್ರಮಕ್ಕೆ ಹಿಂದೇಟು: ಕೊರೋನ ಸೋಂಕಿನಿಂದ ದ.ಕ. ಜಿಲ್ಲೆಯಲ್ಲಿ ಪ್ರಥಮ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವೈದ್ಯರ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಿತ್ತು.  ಕೊರೋನ ಸೋಂಕಿಗೆ ಬಲಿಯಾದ ಮಹಿಳೆಗೆ ಸೋಂಕಿನ ಲಕ್ಷಣವಿದ್ದರೂ ಕೂಡ ಜಿಲ್ಲಾಡಳಿತಕ್ಕೆ ಸಕಾಲಕ್ಕೆ ಮಾಹಿತಿ ನೀಡಲಿಲ್ಲ ಎಂದು ಆರೋಪಿಸಿ ವೈದ್ಯಾಧಿಕಾರಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ಠಾಣೆಯಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಆದರೆ ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ಪ್ರಕರಣ ಹೆಚ್ಚಾಗಲು ಪ್ರಮುಖ ಕಾರಣವಾದ ಪಡೀಲ್‌ನ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಜಿಲ್ಲಾಡಳಿತದಿಂದ ಈವರೆಗೆ ಯಾವುದೇ ಕಾನೂನು ಕ್ರಮವಾಗಿಲ್ಲ.

ಪಡೀಲ್‌ನ ಖಾಸಗಿ ಆಸ್ಪತ್ರೆಯ ಕೊರೋನ ಸೋಂಕಿನ ಮೂಲ ಎಲ್ಲಿಂದ ಮತ್ತು ಆ ಬಗ್ಗೆ ಏನೇನು ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ‘ವಾರ್ತಾಭಾರತಿ’ ಮೊಬೈಲ್ ಮೂಲಕ ಪ್ರಶ್ನಿಸಿದಾಗ ಉತ್ತರಿಸದೆ ಸಂಪರ್ಕ ಕಡಿತಗೊಳಿಸಿದ್ದಾರೆ.

ಶುಕ್ರವಾರ ಭಟ್ಕಳದಲ್ಲಿ 12 ಹೊಸ ಪ್ರಕರಣ ಪತ್ತೆಯಾಗಲು ಪಡೀಲ್‌ನ ಖಾಸಗಿ ಆಸ್ಪತ್ರೆಯೇ ಮೂಲ ಎಂದು ಸ್ಪಷ್ಟವಾಗಿದ್ದರೂ ಕೂಡ ಜಿಲ್ಲಾಡಳಿತ ಇನ್ನೂ ಜಾಣ ಮೌನ ತಾಳಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಪತ್ತೆಯಾದ ಕೊರೋನ ಸೋಂಕಿನ ಅರ್ಧಕ್ಕರ್ಧ ಪ್ರಕರಣಕ್ಕೆ ಮೂಲ ಕಾರಣವಾದ ಖಾಸಗಿ ಆಸ್ಪತ್ರೆಯ ವಿರುದ್ಧ ಜಿಲ್ಲಾಡಳಿತ ಯಾವುದೇ ಕ್ರಮ ಜರುಗಿಸದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News