×
Ad

​ಕೋವಿಡ್-19: ಉಡುಪಿಯಲ್ಲಿ ಮತ್ತೆ 25 ವರದಿ ನೆಗೆಟಿವ್

Update: 2020-05-08 21:08 IST

ಉಡುಪಿ, ಮೇ 8: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್- 19) ಸೋಂಕಿನ ಸ್ಯಾಂಪಲ್ ಪರೀಕ್ಷೆಯಲ್ಲಿ ಶುಕ್ರವಾರ ಇನ್ನೂ 25 ಮಾದರಿಗಳು ನೆಗೆಟಿವ್ ಆಗಿವೆ. ಜಿಲ್ಲೆಯಿಂದ ಇನ್ನೂ 112ರ ಫಲಿತಾಂಶ ಬರಬೇಕಿದ್ದು, ಇದರಲ್ಲಿ ಇಂದು ಕಳುಹಿಸಿದ 57 ಸ್ಯಾಂಪಲ್‌ಗಳೂ ಸೇರಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಶುಕ್ರವಾರ ಕೊರೋನ ರೋಗದ ಗುಣಲಕ್ಷಣಗಳಿದ್ದ 57 ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಇವುಗಳಲ್ಲಿ ಐವರು ತೀವ್ರ ಉಸಿರಾಟದ ತೊಂದರೆಯವರು, ಏಳು ಮಂದಿ ಶೀತಜ್ವರದಿಂದ ಬಳಲುವವರು ಹಾಗೂ 45 ಮಂದಿ ಕೊರೋನ ಹಾಟ್‌ಸ್ಪಾಟ್‌ನಿಂದ ಬಂದವರ ಸ್ಯಾಂಪಲ್‌ಗಳು ಸೇರಿವೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು 1467 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 1355ರ ವರದಿ ಬಂದಿದ್ದು, 1352 ನೆಗೆಟಿವ್ ಆಗಿವೆ. ಜಿಲ್ಲೆಯಲ್ಲಿ ಪಾಸಿಟಿವ್ ಬಂದ ಮೂರು ಗುಣಮುಖರಾಗಿದ್ದಾರೆ ಎಂದರು.

ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು 9 ಮಂದಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಒಬ್ಬರು ಕೊರೋನ ಶಂಕಿತರು, ಐವರು ತೀವ್ರತರದ ಉಸಿರಾಟ ತೊಂದರೆಗೆ ಹಾಗೂ ಮೂವರು ಶೀತಜ್ವರದ ಬಾಧೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. 9 ಮಂದಿಯಲ್ಲಿ ಐವರು ಪುರುಷರಾದರೆ, ನಾಲ್ವರು ಮಹಿಳೆಯರು. ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 13 ಮಂದಿ ಬಿಡುಗಡೆಗೊಂಡಿದ್ದು, 46 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. 416 ಮಂದಿ ಈವರೆಗೆ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ ವಿವಿಧ ಹಿನ್ನೆಲೆಯೊಂದಿಗೆ 60 ಮಂದಿ ಇಂದು ಹೊಸದಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4184 ಮಂದಿಯನ್ನು ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 2571 (ಇಂದು 68) ಮಂದಿ 28 ದಿನಗಳ ನಿಗಾವನ್ನೂ, 3398 (35) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗ ಒಟ್ಟು 716 ಮಂದಿ ಹೋಮ್ ಕ್ವಾರಂಟೈನ್ ಹಾಗೂ 24 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ಮಾಹಿತಿ ನೀಡಿದರು.

ಗುರುವಾರ 900 ಮಂದಿ ಜಿಲ್ಲೆಗೆ
ಲಾಕ್‌ಡೌನ್ ಬಳಿಕ ಕಳೆದ ರವಿವಾರದಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಜನತೆಗೆ ಉಡುಪಿ ಜಿಲ್ಲೆಗೆ ಪ್ರವೇಶಿಸಲು ಇ-ಪಾಸ್ ಹಾಗೂ ಆನ್‌ಲೈನ್ ಪಾಸ್‌ಗಳ ಮೂಲಕ ಅವಕಾಶ ನೀಡಿದ ಬಳಿಕ ಸುಮಾರು 4000 ಮಂದಿ ಜಿಲ್ಲೆಯನ್ನು ಪ್ರವೇಶಿಸಿದ್ದಾರೆ. ಗುರುವಾರ ಸುಮಾರು 900 ಮಂದಿ ಜಿಲ್ಲೆಯಲ್ಲಿರುವ 12 ಚೆಕ್‌ಪೋಸ್ಟ್‌ಗಳ ಮೂಲಕ ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದ್ದಾರೆ ಎಂದು ಡಾ.ಸೂಡ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News