ಭಟ್ಕಳದಲ್ಲಿ ಹೆಚ್ಚಿದ ಕೊರೋನ ಪ್ರಕರಣ: ಉಡುಪಿ ಗಡಿಭಾಗದಲ್ಲಿ ಹೆಚ್ಚಿದ ಆತಂಕ
ಉಡುಪಿ, ಮೇ 8: ಉತ್ತರ ಕನ್ನಡದ ದಕ್ಷಿಣದ ಗಡಿ ಪ್ರದೇಶವಾದ ಭಟ್ಕಳದಲ್ಲಿ ಇಂದು ಒಂದೇ ದಿನದಲ್ಲಿ 12 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಉತ್ತರದ ಗಡಿಯಾದ ಶಿರೂರಿನಲ್ಲಿ ಈಗ ಆತಂಕದ ವಾತಾವರಣ ಕಂಡುಬಂದಿದೆ. ಭಟ್ಕಳ, ಉಡುಪಿ ಮತ್ತು ಮಂಗಳೂರಿನೊಂದಿಗೆ ಹೆಚ್ಚಿನ ವ್ಯಾವಹಾರಿಕ ಸಂಪರ್ಕವನ್ನು ಹೊಂದಿರುವುದೇ ಇದಕ್ಕೆ ಕಾರಣವೆನ್ನಬಹುದು.
ಆದುದರಿಂದ ಶಿರೂರಿನ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಉತ್ತರಕನ್ನಡ ಗಡಿಯನ್ನು ಹಂಚಿಕೊಳ್ಳುವ ಉಡುಪಿಯ ಗಡಿಭಾಗದ ಶಿರೂರು ಟೋಲ್‌ನಲ್ಲಿರುವ ಪೊಲೀಸರಿಗೆ ಇದು ಸವಾಲಾಗಿ ಪರಿಣಮಿಸಿದೆ.
ಉತ್ತರ ಕನ್ನಡದಲ್ಲಿ ಮೇ 4ರವರೆಗೆ ಕೊರೋನ ಪ್ರಕರಣ ನಿಯಂತ್ರಣದಲ್ಲಿತ್ತು. ಆವರೆಗೆ ಅಲ್ಲಿ 11 ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ದು, ಸೂಕ್ತ ಚಿಕಿತ್ಸೆಯೊಂದಿಗೆ ಎಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದರು. ಆದರೆ ಮೇ 5ರಂದು ಭಟ್ಕಳದ 18ರ ಹರೆಯದ ಯುವತಿಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಈಕೆಯ ಸಂಪರ್ಕಕ್ಕೆ ಬಂದ 12 ಮಂದಿ ಇಂದು ಕೊರೋನ ಸೋಂಕಿನೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಶಿರೂರು ಟೋಲ್‌ಗೇಟ್‌ನಲ್ಲಿದ್ದ ಭದ್ರತೆಯನ್ನು ಇನ್ನಷ್ಟು ಬಿಗುಗೊಳಿಸಲಾಗಿದೆ. ಅಲ್ಲದೇ ಅಲ್ಲಿರುವ ಕೋವಿಡ್ ತಪಾಸಣಾ ಕೇಂದ್ರವನ್ನೂ ಸುಸಜ್ಜಿತಗೊಳಿಸಲಾಗಿದೆ. ಅದೇ ರೀತಿ ದಕ್ಷಿಣ ಕನ್ನಡದೊಂದಿಗೆ ಗಡಿ ಹಂಚಿ ಕೊಳ್ಳುವ ಹೆಜಮಾಡಿ ಟೋಲ್‌ನಲ್ಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಉಡುಪಿಯಲ್ಲಿ ಕೇವಲ ಮೂರು ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ದು, ಮಾ.29ರ ಬಳಿಕ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.