ವಿಶಾಖಪಟ್ಟಣ ದುರಂತ: ದ.ಕ. ಜಿಲ್ಲೆಯಲ್ಲಿ ವಿಶೇಷ ನಿಗಾ ವಹಿಸಲು ಸಚಿವರ ಆದೇಶ
Update: 2020-05-08 21:41 IST
ಮಂಗಳೂರು,ಮೇ.8:ವಿಶಾಖಪಟ್ಟಣದಲ್ಲಿ ಅನಿಲ ಸೋರಿಕೆಯಿಂದ ಉಂಟಾದ ದುರಂತದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೂಡ ವಿಶೇಷ ನಿಗಾ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಅದೇಶಿಸಿದ್ದಾರೆ.
ಅವರು ಇಂದು ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿ, ಎಂ.ಆರ್.ಪಿ.ಎಲ್, ಬಿ.ಎ.ಎಸ್.ಎಫ್, ಎಂ.ಸಿ.ಎಫ್. ಸೇರಿದಂತೆ ತಕ್ಷಣವೇ ಜಿಲ್ಲೆಯಲ್ಲಿರುವ ಅನಿಲ ಸ್ಥಾವರಗಳ ಭದ್ರತಾ ವ್ಯವಸ್ಥೆ, ಕಾರ್ಯಾಚರಣೆ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಬೇಕು. ಘಟಕಗಳ ಆಂತರಿಕ ವ್ಯವಸ್ಥೆ ಬಗ್ಗೆ ಇನ್ನಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ವಿಶಾಖಪಟ್ಟಣದ ದುರಂತದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಸಾರ್ವಜನಿಕರಿಂದ ಆತಂಕ ವ್ಯಕ್ತವಾಗುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲರನ್ನೂ ಕರೆದು ಸಭೆ ನಡೆಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.