×
Ad

ಮಣಿಪಾಲದ ಕರೆಂಟ್ ಟ್ರಾನ್ಸ್‌ಫಾರ್ಮರ್ ಭಸ್ಮ: ನಾಲ್ಕು ಸಬ್‌ಡಿವಿಜನ್‌ಗಳಲ್ಲಿ ವಿದ್ಯುತ್ ವ್ಯತ್ಯಯ

Update: 2020-05-08 22:37 IST

ಉಡುಪಿ, ಮೇ 8: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ಸಂಬಂಧಿಸಿದ ಮಣಿಪಾಲದ ಸ್ಟೇಷನ್‌ನಲ್ಲಿರುವ ಕರೆಂಟ್ ಟ್ರಾನ್ಸ್‌ಫಾರ್ಮರ್ (ಸಿ.ಟಿ.) ಸುಟ್ಟು ಹೋದ ಕಾರಣ ಮೇ 7ರಂದು ರಾತ್ರಿ ಉಡುಪಿ ಡಿವಿಜನ್ ವ್ಯಾಪ್ತಿಯ ನಾಲ್ಕು ಸಬ್‌ಡಿವಿಜನ್‌ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಜನ ತೊಂದರೆ ಅನುಭವಿಸುವಂತಾಯಿತು.

ವಿದ್ಯುತ್ ಮಾಪನ ಮಾಡುವ ಈ ಕರೆಂಟ್ ಟ್ರಾನ್ಸ್‌ಫಾರ್ಮರ್ ರಾತ್ರಿ 9:45ರ ಸುಮಾರಿಗೆ ಅಕಸ್ಮಿಕವಾಗಿ ಸುಟ್ಟು ಹೋಯಿತ್ತೆನ್ನಲಾಗಿದೆ. ಇದರಿಂದ ಮಣಿಪಾಲ, ಉಡುಪಿ, ಕಾಪು ಹಾಗೂ ಬ್ರಹ್ಮಾವರ ಸಬ್‌ಡಿವಿಜನ್‌ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಈ ಸೆಕೆಯ ಮಧ್ಯೆ ವಿದ್ಯುತ್ ಕೈಕೊಟ್ಟಿರುವುದರಿಂದ ಜನ ರಾತ್ರಿ ವೇಳೆ ಸಾಕಷ್ಟು ತೊಂದರೆ ಪಡುವಂತಾಯಿತು. ಈ ಹಿನ್ನೆಲೆಯಲ್ಲಿ ಮೆಸ್ಕಾಂಗೆ ನೂರಕ್ಕೂ ಅಧಿಕ ದೂರಿನ ಕರೆಗಳು ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬಳಿಕ ರಾತ್ರೋರಾತ್ರಿ ಮೆಸ್ಕಾಂ ಅಧಿಕಾರಿಗಳ ಸೂಚನೆಯಂತೆ ಸಿಬ್ಬಂದಿಗಳು ದುರಸ್ತಿ ಕಾರ್ಯ ನಡೆಸಿದರು. ರಾತ್ರಿ 11:45ರ ಸುಮಾರಿಗೆ ಸಿ.ಟಿ.ಯ ಬದಲು ಬೈಪಾಸ್ ಮೂಲಕ ವಿದ್ಯುತ್ ಒದಗಿಸುವ ಕಾರ್ಯ ಮಾಡಲಾಯಿತು. ಮೇ 8ರಂದು ಮಧ್ಯಾಹ್ನ 12ಗಂಟೆಯಿಂದ 1:30ರ ಮಧ್ಯಾವಧಿಯಲ್ಲಿ ಕೆಪಿಟಿಸಿಎಲ್ ನಿಂದ ಸಿ.ಟಿ.ಯನ್ನು ಬದಲಾಯಿಸಿ ಹೊಸ ಸಿ.ಟಿ.ಯನ್ನು ಆಳವಡಿಸಲಾಗಿದೆ ಎಂದು ಮೆಸ್ಕಾಂ ಉಡುಪಿ ವೃತ್ತದ ಅಧೀಕ್ಷಕ ಅಭಿಯಂತರ ನರಸಿಂಹ ಪಂಡಿತ್ ತಿಳಿಸಿದ್ದಾರೆ.

ಮೇ 8ರಂದು ನಸುಕಿನ ವೇಳೆ ಗುಡುಗು ಸಿಡಿಲು, ಗಾಳಿ ಸಹಿತ ಸುರಿದ ಭಾರೀ ಮಳೆಗೆ ಕಾಪು, ಉಡುಪಿ, ಬ್ರಹ್ಮಾವರ, ಮಣಿಪಾಲ ಮೆಸ್ಕಾಂ ಸಬ್ ಡಿವಿಜನ್ ವ್ಯಾಪ್ತಿಯಲ್ಲಿ ಒಟ್ಟು 48 ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿವೆ. ಇವುಗಳ ದುರಸ್ತಿ ಕಾರ್ಯ ಇಂದು ಬೆಳಗ್ಗೆಯಿಂದ ನಡೆಯುತ್ತಿದೆ ಎಂದು ಉಡುಪಿ ಡಿವಿಜನ್ ಕಾರ್ಯನಿರ್ವಹಕ ಅಭಿಯಂತರ ದಿನೇಶ್ ಉಪಾಧ್ಯಾಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News